ಉದ್ಯಮಿಗಳು ರಾಜಕಾರಣಕ್ಕೆ ಬರಬೇಕು: ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ
ಬೆಂಗಳೂರು, ಜು.8: ರಾಜಕಾರಣದಲ್ಲಿ ಪ್ರತಿಭಾವಂತರು ಮತ್ತು ಅರ್ಹರ ಅಪಾರ ಕೊರತೆ ಇದ್ದು, ದೊಡ್ಡ ಶೂನ್ಯ ಸೃಷ್ಟಿಯಾಗಿದೆ. ಆದುದರಿಂದ, ಯುವ ಉದ್ಯಮಿಗಳು ಆರ್ಥಿಕ ಸಮೃದ್ಧಿಯನ್ನು ಸಾಧಿಸಿದ ಮೇಲೆ ರಾಜಕೀಯಕ್ಕೆ ಧುಮುಕಿ, ದೇಶ ನಿರ್ಮಾಣದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕಾದ ಅಗತ್ಯ ಸಾಕಷ್ಟಿದೆ ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕರೆ ಕೊಟ್ಟಿದ್ದಾರೆ.
ಶುಕ್ರವಾರ ನಗರದಲ್ಲಿ ಭಾರತೀಯ ಕೈಗಾರಿಕೋದ್ಯಮಗಳ ಒಕ್ಕೂಟ(ಸಿಐಐ)ದ ಅಂಗಸಂಸ್ಥೆಯಾದ ಯಂಗ್ ಇಂಡಿಯನ್ಸ್ ಕೂಟವು ಏರ್ಪಡಿಸಿದ್ದ ಯುವ ಭಾರತೀಯರ ರಾಷ್ಟ್ರೀಯ ಸಮಾವೇಶ ‘ಉತ್ಕರ್ಷ-2022'ನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಚಿವರ ಈ ಅನಿರೀಕ್ಷಿತ ಆಹ್ವಾನದಿಂದ ಚಕಿತರಾದ 300ಕ್ಕೂ ಹೆಚ್ಚು ಯುವ ಉದ್ಯಮಿಗಳು ಸಭಾಂಗಣದಲ್ಲಿ ಎದ್ದು ನಿಂತು, ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಉದ್ಯಮಿಗಳು ಬರೀ ಹಣ ಮಾಡಿದರೆ ಸಾಲದು. ತಮ್ಮ ಆದಾಯವನ್ನು ನಂತರ ಯಾವುದಕ್ಕೆ ವಿನಿಯೋಗಿಸುತ್ತಾರೆ ಎನ್ನುವುದು ಮುಖ್ಯ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ ನಾವೆಲ್ಲರೂ ನಮಗೆ ಪ್ರತಿಯೊಂದನ್ನೂ ಕೊಡುವ ಸಮಾಜ ಮತ್ತು ದೇಶದ ಒಳಿತಿನ ಬಗ್ಗೆಯೂ ಯೋಚಿಸಬೇಕು. ಹಾಗೆಯೇ, ಗ್ರಾಮೀಣ ಪ್ರದೇಶದ ಒಳಿತು ಮತ್ತು ಅವಕಾಶವಂಚಿತರ ಬಗ್ಗೆಯೂ ಗಮನ ಹರಿಸಬೇಕು. ಸರಕಾರ ಇವೆಲ್ಲವುಗಳ ಬಗ್ಗೆ ಗಮನ ಹರಿಸಿರುವುದರಿಂದ ಈಗ ಎಲ್ಲೆಡೆ ಉತ್ತರದಾಯಿತ್ವದ ಸಂಸ್ಕøತಿ ಕಾಣುತ್ತಿದೆ ಎಂದು ಅಶ್ವತ್ಥ ನಾರಾಯಣ ನುಡಿದರು.
ಇಂದು ದೇಶ ಮತ್ತು ಜಗತ್ತಿನಲ್ಲಿ ಆಗುತ್ತಿರುವ ಅಗಾಧ ಪರಿವರ್ತನೆಯನ್ನು ಪ್ರಧಾನಿ ಮೋದಿ ಕ್ಷಿಪ್ರಗತಿಯಲ್ಲಿ ಗ್ರಹಿಸುತ್ತಿದ್ದಾರೆ. ಅವರಿಂದಾಗಿ ಆರ್ಥಿಕತೆಯ ಡಿಜಿಟಲೀಕರಣ, ಸುಗಮ ಜಿಎಸ್‍ಟಿ ವ್ಯವಸ್ಥೆ ಸೇರಿದಂತೆ ಹಲವು ಕ್ರಾಂತಿಕಾರಿ ಪರಿವರ್ತನೆಗಳು ಸಂಭವಿಸಿವೆ. ಇದಕ್ಕೆ ತಕ್ಕಂತೆ ರಾಜ್ಯದಲ್ಲಿ ನಾವೀನ್ಯತೆ ಮತ್ತು ಸಂಶೋಧನೆಗೆ ಆದ್ಯತೆ ಕೊಟ್ಟಿದ್ದು, ಮಾರುಕಟ್ಟೆಯನ್ನು ನಿರಂತರವಾಗಿ ವಿಸ್ತರಿಸಲಾಗುತ್ತಿದೆ ಎಂದು ಅವರು ಹೇಳಿದರು.
135 ಕೋಟಿ ಜನರಿರುವ ದೇಶಕ್ಕೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸೃಷ್ಟಿಸುವ ಗುರಿ ಏನೇನೂ ಅಲ್ಲ. ವಾಸ್ತವವಾಗಿ ನಾವು ಇದಕ್ಕಿಂತ ಹತ್ತು ಪಟ್ಟು ಮೌಲ್ಯದ ಆರ್ಥಿಕ ವ್ಯವಸ್ಥೆಯನ್ನು ಸೃಷ್ಟಿಸಬೇಕಾಗಿದೆ. ಆದರೆ, ಇದುವರೆಗೂ ನಮ್ಮಲ್ಲಿ ಉದ್ಯಮದ ಬೇಡಿಕೆ ಮತ್ತು ಪೂರೈಕೆ ನಡುವೆ ವ್ಯತ್ಯಾಸವಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಇದನ್ನು ಪರಿಹರಿಸಲಾಗುತ್ತಿದೆ ಎಂದು ಅಶ್ವತ್ಥ ನಾರಾಯಣ ಪ್ರತಿಪಾದಿಸಿದರು.
ದೇಶದಲ್ಲಿ ಪರಿವರ್ತನೆ ಬರಬೇಕೆಂದರೆ ಅದು ಸಾಂಸ್ಥಿಕ ಮಟ್ಟದಲ್ಲಿ ಆಗಬೇಕು. ಜತೆಗೆ, ಪ್ರತಿಭೆಗಳನ್ನು ನಾವು ಮುಕ್ತವಾಗಿ ಉತ್ತೇಜಿಸಬೇಕು. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ಪರಿಕಲ್ಪನೆ ಸರಕಾರದ್ದಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಸ್ವಸಹಾಯ ಸಂಘಗಳಿಗೆ ನೀಡುತ್ತಿರುವ ಉತ್ತೇಜನವು ಇದರ ಭಾಗವಾಗಿದೆ ಎಂದು ಅಶ್ವತ್ಥನಾರಾಯಣ ಹೇಳಿದರು.
ಡಿಜಿಟಲೀಕರಣದಿಂದಾಗಿ ಹಣದ ವಹಿವಾಟಿನ ಸ್ವರೂಪ ಮತ್ತು ಈ ಹಣ ಅಕ್ರಮವೋ, ಸಕ್ರಮವೋ ಎನ್ನುವುದೆಲ್ಲ ಬೆರಳ ತುದಿಯಲ್ಲಿ ಗೊತ್ತಾಗುತ್ತದೆ. ಒಟ್ಟಾರೆಯಾಗಿ, ಉದ್ಯಮಿಗಳಲ್ಲೂ ನೈತಿಕ ಮೌಲ್ಯಗಳ ಎಚ್ಚರವಿರಬೇಕು. ಆಗ ಮಾತ್ರ ಆರ್ಥಿಕತೆಯ ಬೆಳವಣಿಗೆಗೆ ಅರ್ಥ ಬರುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ದೇಶದ 30ಕ್ಕೂ ಹೆಚ್ಚು ನಗರಗಳ 300ಕ್ಕೂ ಹೆಚ್ಚು ಉದ್ಯಮಿಗಳು ಪಾಲ್ಗೊಂಡಿದ್ದರು. ಸರಕಾರದ ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣನ್, ಯುವ ಉದ್ಯಮಿಗಳಾದ ದಿಲೀಪ್ ಕೃಷ್ಣ, ರೌನಕ್ ಗೋಯಲ್, ಅರವಿಂದ್ ತೋಂಡನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.