ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯ: ಎಚ್.ವಿಶ್ವನಾಥ್

Update: 2022-07-08 16:40 GMT

ಮೈಸೂರು,ಜು.8: ಲೋಕಾಯುಕ್ತಕ್ಕೆ ಮೂಲ ಸ್ವರೂಪ ನೀಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ನಾಯಕರೂ ಮುಂದಾಗುತ್ತಿಲ್ಲ. ಏಕೆಂದರೆ ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯವಿದೆ ಎಂದು ವಿಧಾನಪರಿಷತ್ ಬಿಜೆಪಿ ಸದಸ್ಯ ಎಚ್,ವಿಶ್ವನಾಥ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾನಾಡಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡುವ ನಿಟ್ಟಿನಲ್ಲಿ ಹೈಕೋರ್ಟ್ ಬೀಸಿದ ಚಾಟಿಯಿಂದಾಗಿ ಓರ್ವ ಜಿಲ್ಲಾಧಿಕಾರಿ, ಓರ್ವ ಐಪಿಎಸ್ ಅಧಿಕಾರಿಯೇ ಜೈಲು ಸೇರಿದ್ದಾರೆ. ಬೆಕ್ಕಿಗೆ ನಾನೇ ಗಂಟೆ ಕಟ್ಟುತ್ತೇನೆಂದು ನಾಡಿನ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಹೇಳಿದ್ದಾರೆ. ಇದು ಜನ ಸಾಮಾನ್ಯರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಹುಟ್ಟಿಸಿದೆ. ಅದಕ್ಕೆ ನಾನು ಅವರನ್ನು ಅಭಿನಂದಿಸುತ್ತೇನೆ ಎಂದರು.

ಶಾಸಕಾಂಗ, ಕಾರ್ಯಾಂಗ ವಿಫಲವಾದಾಗ ನ್ಯಾಯಾಂಗ ತನ್ನ ಮಹತ್ವದ ಕಾರ್ಯ ಮಾಡಿ ತೋರಿಸಿದೆ. ಭ್ರಷ್ಟಾಚಾರ ನಿಗ್ರಹ ದಳ, ಸಿಒಡಿಗೆ ಮುಕ್ತ ಅವಕಾಶ ನೀಡಿದ್ದರಿಂದ 30 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. 1984ರಲ್ಲಿ ಲೋಕಪಾಲ್ ಕೇಂದ್ರಕ್ಕೆ ಬೇಕು. ಲೋಕಾಯುಕ್ತ ರಾಜ್ಯಕ್ಕೆ ಬೇಕು ಎಂದು ಮೊರಾರ್ಜಿಬಾಯಿ ನೇತೃತ್ವದ ಸಮಿತಿ ಶಿಫಾರಸ್ಸು ಮಾಡಿತ್ತು. ಪರಿಣಾಮ ನಮ್ಮ ರಾಜ್ಯದಲ್ಲೂ ಬಲಿಷ್ಠ ಲೋಕಾಯುಕ್ತವಿತ್ತು. ದುರದೃಷ್ಟವಶಾತ್ ಮುಚ್ಚಿಹೋಗಿದ್ದ ಲೋಕಾಯುಕ್ತಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮರುಜೀವ ನೀಡಿದ್ದಾರೆ. ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.ಲೋಕಾಯುಕ್ತರಿಗೆ ಪರಮಾಧಿಕಾರ ಕೊಡಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಬಳ್ಳಾರಿಯಿಂದ ಬೆಂಗಳೂರುವರೆಗೆ ಪಾದಯಾತ್ರೆ ಮಾಡಿ ಸಿಎಂ ಆಗಲು ಲೋಕಾಯುಕ್ತದ ಪಾತ್ರ ಪ್ರಮುಖವಾದದ್ದು. ಆದರೆ ಸಿದ್ದರಾಮಯ್ಯ ಸಿಎಂ ಆದ ನಂತರ ಲೋಕಾಯುಕ್ತಕ್ಕೇ ಬಾಗಿಲು ಹಾಕಿದರು. ಲೋಕಾಯುಕ್ತಕ್ಕೆ ಮೂಲ ಸ್ವರೂಪ ನೀಡಲು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ನಾಯಕರೂ ಮುಂದಾಗುತ್ತಿಲ್ಲ. ಏಕೆಂದರೆ ಮೂರು ಪಕ್ಷಗಳ ನಾಯಕರಿಗೂ ಲೋಕಾಯುಕ್ತದ ಬಗ್ಗೆ ಭಯವಿದೆ. ಹಾಗಾಗಿ ಇಡೀ ವ್ಯವಸ್ಥೆಯನ್ನು ಅಧಿಕಾರಶಾಹಿ ಮತ್ತು ರಾಜಕಾರಣಿಗಳು ನಿಯಂತ್ರಿಸುತ್ತಿದ್ದಾರೆ. ಸರ್ಕಾರ ಮತ್ತೆ ಲೋಕಾಯುಕ್ತಕ್ಕೆ ಬಲ ತುಂಬಬೇಕು. ಲೋಕಾಯುಕ್ತವನ್ನು ಸರ್ಕಾರ ಮೂಲ ಸ್ವರೂಪಕ್ಕೆ ತರಬೇಕು ಎಂದು ಆಗ್ರಹಿಸಿದರು.

ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಬಿ ವೈ ವಿಜಯೇಂದ್ರ ಹೆಸರು ಥಳುಕು ಹಾಕಿಕೊಂಡಿರುವ ಕುರಿತು ಪ್ರತಿಕ್ರಿಯಿಸಿ ಯಾವುದೇ ರಾಜಕಾರಣಿ ಎಷ್ಟೇ ದೊಡ್ಡವರಿರಲಿ. ವಿಜಯೇಂದ್ರರೇ ಇರಲಿ, ಅಶ್ವತ್ಥ್ ನಾರಾಯಣ್ ಇರಲಿ ಅವರೂ ತಪ್ಪೆಸಗಿದ್ದರೇ ಕ್ರಮ ಕೈಗೊಳ್ಳಬೇಕು ಎಂದರು.

ಸಿಎಂ ಬಸವರಾಜ ಬೊಮ್ಮಾಯಿಯವರು ಆಡಳಿತಕ್ಕೆ ವೇಗ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಸಂಪುಟ ಸಹೋದ್ಯೋಗಿಗಳು ಇದಕ್ಕೆ ಕೈ ಜೋಡಿಸುತ್ತಿಲ್ಲ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಸಚಿವ ಸಂಪುಟ ವಿಸ್ತರಣೆ, ಪುನರ್ ರಚನೆ ಆಗುವುದು ಅನುಮಾನ. ನಿಗಮ ಮಂಡಳಿಗಳ ಅಧ್ಯಕ್ಷರನ್ನು ಬದಲಾವಣೆ ಮಾಡಿದರೆ ಯಡಿಯೂರಪ್ಪ ಸುಮ್ಮನಿರುತ್ತಾರಾ? ಹಾಗಾಗಿ ನೇರವಾಗಿ ಚುನಾವಣೆಗೆ ಹೋಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News