ತಮ್ಮ ದುರ್ಬಲತೆ ಮುಚ್ಚಿಕೊಳ್ಳಲು ಬಾಯಿಗೆ ಬಂದಂತೆ ಮಾತನಾಡಬಾರದು: ಸಚಿವ ನಾಗೇಶ್ ವಿರುದ್ಧ ಎಚ್.ಸಿ.ಮಹದೇವಪ್ಪ ಟೀಕೆ

Update: 2022-07-08 17:27 GMT

ಬೆಂಗಳೂರು, ಜು. 8: ‘ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜವಾಬ್ದಾರಿಯಿಂದ ಮಾತನಾಡುವುದನ್ನು ಕಲಿಯಬೇಕು. ತಮ್ಮ ದುರ್ಬಲತೆಯನ್ನು ಮುಚ್ಚಿಡಲು ಬಾಯಿಗೆ ಬಂದ ಹಾಗೆ ಮಾತನಾಡಬಾರದು' ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟೀಕೆ ಮಾಡಿದ್ದಾರೆ.

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಶಾಲಾ ಮಕ್ಕಳ ಶೂ ಮತ್ತು ಸಾಕ್ಸ್ ಎಂಬುದು ಒಂದು ಸೌಲಭ್ಯಕ್ಕಿಂತ ಹೆಚ್ಚಾಗಿ ಗ್ರಾಮೀಣ ಲೋಕದ ಬಡ ಮಕ್ಕಳಲ್ಲಿ ಕಲಿಯುವ ಉತ್ಸಾಹವನ್ನು ಇಮ್ಮಡಿಗೊಳಿಸುವ ಮತ್ತು ಬಡತನದಲ್ಲಿ ಉಂಟು ಮಾಡುವ ಸಂತಸವಾಗಿರುತ್ತದೆ. ಸಂವೇದನಾರಹಿತ ಸಚಿವರಿಗೆ ಇದು ಅರ್ಥವಾಗುತ್ತದೆ ಎಂದುಕೊಳ್ಳುವುದು ನಮ್ಮ ಮೂರ್ಖತನವೇ ಸರಿ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಕ್ಕಳ ಶೈಕ್ಷಣಿಕ ಅನುಕೂಲಕ್ಕಾಗಿ ವಿದ್ಯಾಸಿರಿ, ಹಾಲು, ಮೊಟ್ಟೆ ವಿತರಣೆ ಆದಿಯಾಗಿ ಶೂಗಳನ್ನೂ ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಜನ ಸಾಮಾನ್ಯರಿಗೆ, ಬಡವರಿಗೆ ಮತ್ತು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹತ್ತಾರು ಯೋಜನೆಗಳನ್ನು ನೀಡಲಾಗಿತ್ತು. ಆದರೆ, ಈಗಿನ ಬಿಜೆಪಿ ಸರಕಾರ ತನ್ನ ಆಡಳಿತಾವಧಿಯಲ್ಲಿ 2 ಲಕ್ಷ ಕೋಟಿ ರೂ.ಗಳಿಂದ 5 ಲಕ್ಷ ಕೋಟಿ ರೂ. ವರೆಗಿನ ಸಾಲ ಮಾಡಿದ್ದರೂ ಇರುವ ಯೋಜನೆಗಳನ್ನೆಲ್ಲಾ ರದ್ದುಪಡಿಸುತ್ತಿದೆ' ಎಂದು ಅವರು ಟೀಕಿಸಿದ್ದಾರೆ.

‘ಹೀಗಿದ್ದ ಮೇಲೆ ಸರಕಾರ ಹೆಚ್ಚುವರಿಯಾಗಿ ಮಾಡಿರುವ 3 ಲಕ್ಷ ಕೋಟಿ ರೂ.ಗಳ ಸಾಲವು ಯಾರ ಜೇಬಿಗೆ ಹೋಗಿದೆ ಎಂಬುದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅಪ್ಪಟ ದೇಶಪ್ರೇಮಿಗಳೆಂದು ಬಿಂಬಿಸಿಕೊಳ್ಳುವ ಆರೆಸೆಸ್ಸ್‍ನವರು ರಾಜ್ಯದ ಜನತೆಗೆ ತಿಳಿಸಲಿ' ಎಂದು ಮಹದೇವಪ್ಪ ಇದೇ ವೇಳೆ ಸವಾಲು ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News