ವಿಜಯಪುರ | ಜಿಲ್ಲೆಯ ಹಲವೆಡೆ ಭೂಕಂಪನದ ಅನುಭವ
Update: 2022-07-09 09:34 IST
ವಿಜಯಪುರ, ಜು.9: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಬೆಳಗ್ಗೆ ಭೂಕಂಪನದ ಅನುಭವವಾಗಿದ್ದು, ಜನರು ಆತಂಕಿತರಾಗಿದ್ದಾರೆ.
ಬೆಳಿಗ್ಗೆ 6:22ರಿಂದ 6:23ರ ವೇಳೆ 10 ಸೆಕೆಂಡ್ ಗೂ ಅಧಿಕ ಸಮಯ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದೆ. ನಿದ್ರೆಯಿಂದ ಆಗ ತಾನೆ ಎದ್ದವರು, ನಿದ್ದೆಯ ಮಂಪರಿನಲ್ಲಿರುವವರು ಕಂಪನ ಮತ್ತು ಭಾರೀ ಶಬ್ದದಿಂದ ಬೆಚ್ಚಿಬಿದ್ದಿದ್ದಾರೆ. ಹೆಚ್ಚಿನವರು ಕ್ಷಣಾರ್ಧದಲ್ಲಿ ಮನೆಗೆಯಿಂದ ಹೊರಗೆ ಓಡಿ ಬಂದರು.
ವಿಜಯಪುರ ನಗರ ಭೂಕಂಪನದ ಕೇಂದ್ರವಾಗಿದ್ದು, ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 4.9 ರಷ್ಟು ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. 9.9 ಕಿ.ಮೀ. ಭೂಮಿಯ ಆಳದಲ್ಲಿ ಭೂಕಂಪನ ಸಂಭವಿಸಿದೆ. ವಿಜಯಪುರ ನಗರ ಸೇರಿದಂತೆ ಬಸವನ ಬಾಗೇವಾಡಿ, ತಿಕೋಟಾ, ಬಬಲೇಶ್ವರ, ಜಮಖಂಡಿ, ಹೊರ್ತಿ, ನೆರೆ ರಾಜ್ಯ ಮಹಾರಾಷ್ಟ್ರದ ಸೋಲಾಪುರ, ಪುಣೆ, ಪಂಢರಪುರದಲ್ಲೂ ಭೂಕಂಪನದ ಅನುಭವವಾಗಿದೆ ಎಂದು ತಿಳಿದುಬಂದಿದೆ.