ಮಲೆನಾಡಿನಲ್ಲಿ ಮುಂದುವರಿದ ಮಳೆಯ ಅಬ್ಬರ: ಅಲ್ಲಲ್ಲಿ ಮನೆ ಕುಸಿತ, ವಿದ್ಯುತ್ ಕಂಬಗಳು ಧರಾಶಾಯಿ
Update: 2022-07-09 11:32 IST
ಚಿಕ್ಕಮಗಳೂರು, ಜು.9: ಮಲೆನಾಡಿನಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಶನಿವಾರವೂ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಮನೆ, ರಸ್ತೆಗಳು ಕುಸಿದಿದ್ದರೆ, ಭಾರೀ ಗಾಳಿಗೆ ಹತ್ತಾರು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ.
ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿಯ ಸುನೀಲ್ ಎಂಬವರಿಗೆ ಸೇರಿದ ಮನೆ ಭಾಗಶಃ ಕುಸಿದಿದೆ. ಇದರಿಂದ ಮನೆಯೊಳಗಿದ್ದ ಪೀಠೋಪಕರಣಗಳು, ಸಾಮಗ್ರಿಗಳು ಹಾನಿಗೀಡಾಗಿವೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಮಣಬೂರಿನಲ್ಲಿ ಭಾರೀ ಮಳೆಗೆ ಕಿರುಸೇತುವೆ ಕುಸಿದಿದೆ. ಇದರಿಂದ ಚಿಕ್ಕಮಗಳೂರು-ಮಣಬೂರು ಸಂಪರ್ಕ ಕಡಿತಗೊಂಡಿದೆ. ಅಲ್ಲಲ್ಲಿ ರಸ್ತೆಗಳು ಕುಸಿಯುತ್ತಿದ್ದು, ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.
ಕೊಪ್ಪ ತಾಲೂಕಿನ ಬಸರಿಕಟ್ಟೆ ಗ್ರಾಮದಲ್ಲಿ ಭಾರೀ ಮಳೆಗಾಳಿಗೆ ಹತ್ತಾರು ವಿದ್ಯುತ್ ಕಂಬಗಳ ಸಹಿತ ಟ್ರಾನ್ಸ್ ಫಾರ್ಮರ್ ಕೂಡಾ ಧರಾಶಾಯಿಯಾಗಿದೆ.