ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ: ಸಿದ್ದರಾಮಯ್ಯ ಆಕ್ರೋಶ

Update: 2022-07-09 14:51 GMT

ಬೆಂಗಳೂರು, ಜು.9: ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗಿದೆ. ಆದರೆ, ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸುವ ಕೆಲಸ ಮಾಡುತ್ತಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಗಾರಿದರು.

ಶನಿವಾರ ನಗರದಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಹಾನಿಯಾಗಿದೆ. ಉಸ್ತುವಾರಿ ಸಚಿವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ. ಒಬ್ಬ ಉಸ್ತುವಾರಿ ಸಚಿವರೂ ಜಿಲ್ಲೆಗಳಿಗೆ ಭೇಟಿ ನೀಡಿಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲಾಧಿಕಾರಿಗಳ ಜೊತೆ ವೀಡಿಯೊ ಕಾನ್ಫರೆನ್ಸ್ ಮಾಡಿದರೆ ಸಾಕಾ? ಸ್ವತಃ ಅವರೇ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಬೇಕು. ಮಳೆ ಹಾನಿ ಪರಿಹಾರ ಕಾರ್ಯಕ್ಕಾಗಿ ಸಾವಿರಾರು ಕೋಟಿ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಆದರೆ, ಕೇಂದ್ರ ಸರಕಾರದಿಂದ ಎಷ್ಟು ಪರಿಹಾರ ಸಿಕ್ಕಿದೆ ಅನ್ನೋದನ್ನು ಹೇಳಲಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಸರಕಾರಿ ಶಾಲೆಯ ಮಕ್ಕಳು, ಖಾಸಗಿ ಶಾಲೆಯ ಮಕ್ಕಳಂತೆ ಸಮವಸ್ತ್ರದ ಜೊತೆಗೆ ಶೂ, ಸಾಕ್ಸ್‍ಗಳನ್ನು ಧರಿಸಿಕೊಂಡು ಬರಲಿ ಎಂಬ ಉದ್ದೇಶದಿಂದ ನಮ್ಮ ಸರಕಾರದ ಅವಧಿಯಲ್ಲಿ ಶೂ, ಸಾಕ್ಸ್‍ಗಳನ್ನು ನೀಡುತ್ತಿದ್ದೆವು. ಆದರೆ, ಈಗ ಬಿಜೆಪಿ ಸರಕಾರ ಇದನ್ನು ನಿಲ್ಲಿಸಲು ಮುಂದಾಗಿದೆ. ನಾವು ಸರಕಾರದ ಮೇಲೆ ನಿರಂತರವಾಗಿ ಒತ್ತಡ ಹೇರಿದ ಬಳಿಕ ಈಗ ಶೂ, ಸಾಕ್ಸ್ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಜಮ್ಮು-ಕಾಶ್ಮೀರದ ಅಮರನಾಥ ಯಾತ್ರೆ ಸಂದರ್ಭದಲ್ಲಿ ಸಂಭವಿಸಿರುವ ಮೇಘಸ್ಫೋಟದಿಂದ ಉಂಟಾಗಿರುವ ಅವಘಡದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಯಾತ್ರಿಗಳನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ: ಸಿದ್ದರಾಮಯ್ಯ 

ಮಾನ್ಯ ಮುಖ್ಯಮಂತ್ರಿ ಅವರ ನಿದ್ದೆ ಬಿಡಿಸಬೇಕಾದರೆ ನಾವು ಎಚ್ಚರಿಸಬೇಕಾಯಿತು. ಬಡ ಶಾಲಾ ಮಕ್ಕಳಿಂದ ಶೂ-ಸಾಕ್ಸ್‍ಗಳನ್ನೂ ಕಿತ್ತುಕೊಳ್ಳಲು ಹೊರಟಿದ್ದ ಮನುಷ್ಯತ್ವವೇ ಇಲ್ಲದ ಅವಿವೇಕಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ ಮಾಡುತ್ತಿರುವ ಎಡವಟ್ಟುಗಳು ಒಂದೋ, ಎರಡೋ? ಮೊದಲು ಈ ಶಿಕ್ಷಣ ವಿರೋಧಿಯನ್ನು ಸಂಪುಟದಿಂದ ಕಿತ್ತು ಹಾಕಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News