ಆರೆಸೆಸ್ಸ್ ಷಡ್ಯಂತ್ರ ಅರಿಯದಿದ್ದರೆ ಭಾರತದ ಭವಿಷ್ಯ ಭೀಕರ: ಮಾವಳ್ಳಿ ಶಂಕರ್ ಎಚ್ಚರಿಕೆ

Update: 2022-07-09 14:58 GMT

ಬೆಂಗಳೂರು, ಜು. 9: ‘ಭಾರತದ ವೈದಿಕ ವಿರೋಧಿ ನಿಜವಾದ ಚರಿತ್ರೆಯನ್ನು ನಾಶ ಮಾಡಿ ಶಾಲಾ ಮಕ್ಕಳ ಪಠ್ಯ ಪುಸ್ತಕಗಳ ಪರಿಷ್ಕರಣೆ ಮೂಲಕ ಪುರೋಹಿತಶಾಹಿ ಇತಿಹಾಸವನ್ನು ವಿಜೃಂಭಿಸಲು ಮುಂದಾಗಿರುವುದು ಆತಂಕಕಾರಿ' ಎಂದು ದಸಂಸ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮೂಲನಿವಾಸಿ ಸಂಘಟನೆಗಳ ಒಕ್ಕೂಟದಿಂದ ಏರ್ಪಡಿಸಿದ್ದ ‘ಮೂಲನಿವಾಸಿ ಬಂಧುತ್ವ ಸಮಾವೇಶ'ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಇತಿಹಾಸವನ್ನು ಅರಿತವನು ಮಾತ್ರ ಚರಿತ್ರೆ ಸೃಷ್ಟಿಸಲು ಸಾಧ್ಯ' ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ್ದಾರೆ. ಆದರೆ, ನಾವಿಂದು ನಮ್ಮ ಮೂಲ ಇತಿಹಾಸವನ್ನೇ ಮರೆಯುವಂತೆ ಆಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

‘ಚಾರ್ವಾಕರು, ಬುದ್ಧ, ಬಸವ, ಶಾಹುಮಹಾರಾಜ್, ಅಂಬೇಡ್ಕರ್ ಸೇರಿದಂತೆ ನಮ್ಮ ಸಮಾಜದ ಸುಧಾರಕರ ನೈಜ ಹೋರಾಟದ ಇತಿಹಾಸವನ್ನು ಅರಿತರೆ ಮಾತ್ರ ನಿಜವಾದ ಭಾರತದ ಚರಿತ್ರೆ ಅರ್ಥವಾಗಲು ಸಾಧ್ಯ ಎಂದ ಮಾವಳ್ಳಿ ಶಂಕರ್, ಶೋಷಿತ ಮತ್ತು ಕೆಳಜಾತಿ ಜನರಿಗೆ ಮಾನವ ಘನತೆ ಕಲ್ಪಿಸುವ ದೃಷ್ಟಿಯಿಂದ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ನೀಡಿದ್ದು ಛತ್ರಪತಿ ಶಾಹುಮಹರಾಜ್ ಎಂದು ಸ್ಮರಿಸಿದರು.

ಭವಿಷ್ಯ ಭೀಕರ: ಮೋದಿ ನೇತೃತ್ವದ ಸರಕಾರ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಮೀಸಲಾತಿಯನ್ನೇ ನಾಶ ಮಾಡಲು ಮುಂದಾಗಿದ್ದು, ಆರೆಸೆಸ್ಸ್, ಸಂಘ ಪರಿವಾರ ಸಂವಿಧಾನವನ್ನು ಕಿತ್ತು ಹಾಕಲು ಹೊರಟಿದ್ದಾರೆ. ಆರೆಸೆಸ್ಸ್ ಷಡ್ಯಂತ್ರವನ್ನು ಅರಿತುಕೊಳ್ಳದಿದ್ದರೆ ಭವಿಷ್ಯದ ಭಾರತ ಅತ್ಯಂತ ಭೀಕರವಾಗಿರಲಿದೆ' ಎಂದು ಮಾವಳ್ಳಿ ಶಂಕರ್ ಎಚ್ಚರಿಸಿದರು.

‘ಸ್ವಾತಂತ್ರ್ಯ, ಸಾಮಾನತೆ, ಜಾತ್ಯತೀತತೆ ಸಂವಿಧಾನದ ಮೂಲ ಆಶಯ. ಆದರೆ, ಆರೆಸೆಸ್ಸ್ ಮತ್ತು ಸಂಘ ಪರಿವಾರದವರು ಈ ಆಶಯಗಳ ವಿರುದ್ಧ ಇದ್ದಾರೆ. ಇವರ ಕುತಂತ್ರಗಳನ್ನು ಅರಿತುಕೊಳ್ಳಬೇಕು. ಜತೆಗೆ ಶಾಲಾ ಪಠ್ಯ ಪುಸ್ತಕಗಳ ಪರಿಷ್ಕರಣೆ ವಿರುದ್ಧ ತಳ ಸಮುದಾಯದ ಯುವಕರು ಎಚ್ಚರಗೊಳ್ಳಬೇಕು' ಎಂದು ಮಾವಳ್ಳಿ ಶಂಕರ್ ಕರೆ ನೀಡಿದರು.

ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಜಾ ಪರಿರ್ವನಾ ವೇದಿಕೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ‘ಮೊಟ್ಟ ಮೊದಲ ಬಾರಿಗೆ ಶೋಷಣೆಗೆ ಗುರಿಯಾಗಿದ್ದ ದಲಿತ ಹಾಗೂ ಅಸ್ಪೃಶ್ಯರಿಗೆ ಮೀಸಲಾತಿ ಕಲ್ಪಿಸಿದ್ದು ಛತ್ರಪತಿ ಶಾಹು ಮಹಾರಾಜರು. ಅವರು ತಮ್ಮ ಆಸ್ಥಾನದ ಆಡಳಿತದಲ್ಲಿ ಶೇ.50ರಷ್ಟು ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಿದ್ದರು' ಎಂದು ನುಡಿದರು.

‘ಶೋಷಿತ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮುಂದೆ ಬರುವ ದೃಷ್ಟಿಯಿಂದ ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮೀಸಲಾತಿಯನ್ನು ಕಲ್ಪಿಸಿದ್ದರು. ದೇಶದಲ್ಲಿ ಹತ್ತು-ಹಲವು ರಾಜ ಮಹಾರಾಜರು ಆಳ್ವಿಕೆ ನಡೆಸಿದರೂ ಶೋಷಿತರಿಗೆ ಮೀಸಲಾತಿಯನ್ನು ಕಲ್ಪಿಸಿದ್ದು ಕೇವಲ ನಾಲ್ವರು ಮಹಾರಾಜರು' ಎಂದು ಶಾಹು ಮಹಾರಾಜರ ಇತಿಹಾಸವನ್ನು ಮೆಲುಕು ಹಾಕಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ಆರ್.ಕೇಶವಮೂರ್ತಿ, ಕರವೇ ಶಿವರಾಮೇಗೌಡ, ದಾಸ್ ಪ್ರಕಾಶ್, ಗೋವಿಂದಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News