ಬ್ರಾಹ್ಮಣ್ಯ ಹಾಗೂ ಕಾರ್ಪೊರೇಟ್ ಒಂದಾಗಿ ಇಡೀ ದೇಶ ಅಲುಗಾಡಿಸುತ್ತಿವೆ: ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ
ಕೋಲಾರ: ‘ಬ್ರಾಹ್ಮಣ್ಯ ಹಾಗೂ ಕಾರ್ಪೊರೇಟ್ ಒಂದಾಗಿ ಇಡೀ ದೇಶ ಅಲುಗಾಡಿಸುತ್ತಿವೆ. ಪ್ರತಿ ಹಳ್ಳಿ, ಮನೆಯನ್ನು ಕುರುಕ್ಷೇತ್ರ ಮಾಡುತ್ತಿವೆ. ದೇಶ ಇಬ್ಭಾಗವಾಗಿ ಒಂದು ಪೇಶ್ವೆ ಬ್ರಾಹ್ಮಣ ಭಾರತ, ಇನ್ನೊಂದು ಅಂಬೇಡ್ಕರ್ ಕನಸಿನ ಪ್ರಭುದ್ಧ ಭಾರತವಾಗಿದೆ. ಇನ್ನು 15 ವರ್ಷಗಳಲ್ಲಿ ಎಲ್ಲಾ ಶೇ 85 ಶೂದ್ರರ ಮಕ್ಕಳ ಕೈಯಲ್ಲಿ ಬಂದೂಕು, ಕತ್ತಿ, ಇಲ್ಲವೇ ಡೆತ್ ನೋಟ್ ಇರಲಿದೆ’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಆತಂಕಪಟ್ಟರು.
ಆದಿಮ ಸಾಂಸ್ಕೃತಿಕ ಕೇಂದ್ರದ ಆಶ್ರಯದಲ್ಲಿ ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿರುವ ಆದಿಮ ಆವರಣದಲ್ಲಿ ಶನಿವಾರ ನಡೆದ ‘ಆದಿಮ ಕಾವ್ಯಯಾನ–2022’ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ದೇಶದ ನದಿಗಳು ವಿಷಯುಕ್ತವಾಗಿರುವುದು ಮಾತ್ರವಲ್ಲ; ರಕ್ತವಾಗಿ ಹರಿಯುತ್ತಿವೆ. ಮುಸ್ಲಿಮರು, ದಲಿತರು ಹಾಗೂ ಮೂಲ ನಿವಾಸಿಗಳ ರಕ್ತವದು. ದಲಿತರ ಮೇಲೆ ನಿತ್ಯ ದೌರ್ಜನ್ಯ ನಡೆಯುತ್ತಿವೆ, ಅವಮಾನಿಸಲಾಗುತ್ತಿದೆ. ದೇಶ ಕಟುಕರ ಮನೆಯಾಗಿದ್ದು, ನಿರ್ನಾಮಕ್ಕೆ ಕಾರ್ಯಸೂಚಿ ಸಿದ್ಧವಾಗಿದೆ. ವಿಶ್ವಗುರುವಲ್ಲ; ಮುಂದೆ ಜಾಗತಿಕಮಟ್ಟದಲ್ಲಿ ನಾಚಿಕೆಗೀಡಾಗಬೇಕಾಗುತ್ತದೆ’ ಎಂದು ಟೀಕಿಸಿದರು.
‘ಶೇ 3ರಷ್ಟು ಇರುವ ಬ್ರಾಹ್ಮಣರು ಶೇ 10 ಮೀಸಲಾತಿಯನ್ನು ಕೇವಲ ಒಂದು ದಿನದಲ್ಲಿ ಪಡೆದುಕೊಳ್ಳುತ್ತಾರೆ. ಯಾವುದೇ ಹೋರಾಟವಿಲ್ಲ, ಅರ್ಜಿ ಸಲ್ಲಿಸಲಿಲ್ಲ. ಆದರೆ, 151 ಜಾತಿಗಳು ಇರುವ ಎಸ್‌ಸಿ,ಎಸ್‌ಟಿ ಸಮುದಾಯದವರಿಗೆ ಒಟ್ಟು ಸೇರಿ ಶೇ 22 ಮೀಸಲಾತಿ. ಇದ್ಯಾವ ನ್ಯಾಯ’ ಎಂದು ಪ್ರಶ್ನಿಸಿದರು.
‘ಘೋರವಾದ ಅನ್ಯಾಯ ತಡೆಯಬೇಕಿದೆ. ಬೇಧ, ತಾರತಮ್ಯ, ಅನ್ಯಾಯ, ತಪ್ಪು ಚರಿತ್ರೆಯನ್ನು ಎದುರಿಸಿ ನಿಲ್ಲುವವನೇ ನಿಜವಾದ ಭಾರತೀಯ. ಲೇಖನಿಯಿಂದ ಎದೆ ಸೀಳಿಕೊಂಡು ಸಾಯುವುದು ಅಥವಾ ವ್ಯವಸ್ಥೆ ವಿರುದ್ಧ ಗನ್ ಎತ್ತಿಕೊಂಡು ಹೋರಾಟ ಮಾಡುವುದು ನಿಜವಾದ ಭಾರತೀಯತೆ. ದೇಶಭಕ್ತರೆಂದು ಸ್ವಯಂ ಘೋಷಿಸಿಕೊಂಡವರು, ಅದಕ್ಕೆ ನೀಡುವ ವ್ಯಾಖ್ಯಾನ ಬರೀ ಪೊಳ್ಳು. ತನ್ನನ್ನು ತಾನು ಹೀನಾಯಗೊಳಿಸುತ್ತಿರುವ ರೂಪವದು’ ಎಂದು ವಾಗ್ದಾಳಿ ನಡೆಸಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ವಿ.ಚಂದ್ರಶೇಖರ ನಂಗಲಿ ಮಾತನಾಡಿ, ‘ನಿಸರ್ಗ ವಿವೇಕವನ್ನು ನಾಶ ಮಾಡುವ ಶಕ್ತಿ ನಾಗರಿಕತೆಗೆ ಇದೆ. ಹೀಗಾಗಿ, ನಿಸರ್ಗದ ವಿವೇಕಕ್ಕೆ ಮರಳಬೇಕು. ಪರಿಸರ ಲಯದ ಜೊತೆ ಗುರುತಿಸಿಕೊಳ್ಳಬೇಕು. ಹಸಿರು ಪಿರಾಮಿಡ್‌ನ ಭಾಗವಾಗಬೇಕು. ನಿಸರ್ಗ ವಿವೇಕವನ್ನು ಮಕ್ಕಳಿಗೆ ಕಲಿಸಬೇಕು’ ಎಂದು ಸಲಹೆ ನೀಡಿದರು.
‘ನಾಗರಿಕ ಮಾನವ ಪಂಜರದಲ್ಲಿ ಹುಟ್ಟಿ, ಅಲ್ಲೇ ಬೆಳೆದು, ಅಲ್ಲೇ ಸಾಯುತ್ತಿದ್ದಾನೆ. ಬೆಂಗಳೂರು ನಗರ ಒಂದು ಪಂಜರದಂತಿದೆ. ಹಾಗೆಯೇ ಸೈಬರಿಕ ಸಮಾಜ ನಿಸರ್ಗದಿಂದ ಬಹು ದೂರು ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
‘ಸೈಬರಿಕ ಸಮಾಜಕ್ಕೂ ನಿಸರ್ಗಕ್ಕೂ ಸಂಬಂಧವಿಲ್ಲವಾಗಿದೆ. ಪ್ರಜ್ಞಾವಂತರು ಇವೆರಡನ್ನೂ ಮೀರಿದ ಅರಿವಿನ ಕಡೆ ಪ್ರಯಾಣಿಸಬೇಕಿದೆ’ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಕೆ.ವಿ.ನೇತ್ರಾವತಿ, ‘ಕೊರೋನ ಕಾಲಘಟ್ಟದಲ್ಲೂ ರಾಶಿ ಕವಿತೆಗಳು ಮೂಡಿಬಂದವು. ಕಾವ್ಯಯಾನ ನಿರಂತರವಾಗಿ ನಡೆಯಬೇಕು. ಕವಿತೆಗಳು ಮಾತನಾಡಬೇಕು, ಚರ್ಚೆಗೆ ಒಳಪಡಬೇಕು’ ಎಂದರು.
ಶ್ರೀದೇವಿ ಕೆರೆಮನೆ ಮಾತನಾಡಿ, ‘ಕವಿಗಳು ವಿರೋಧ ಪಕ್ಷದಲ್ಲಿರಬೇಕು. ಇಲ್ಲದಿದ್ದರೆ ಬಕೆಟ್ ಹಿಡಿಯುವ ಕಾರ್ಯವಾಗುತ್ತದೆ. ಪ್ರಭುತ್ವದ ವಿರುದ್ಧ ಬರೆದ ಕವಿತೆ ಬಹಳಷ್ಟು ವರ್ಷ ಗಟ್ಟಿಯಾಗಿ ಉಳಿಯುತ್ತದೆ. ಆದರೆ, ಈಚೆಗೆ ಕವಯತ್ರಿಯರ ಸಂಖ್ಯೆ ತೀರಾ ಕಡಿಮೆಯಾಗುತ್ತಿದೆ’ ಎಂದು ಬೇಸರ ವ್ಯಕ್ತಡಿಸಿದರು.
ನಾ.ವೆಂಕಟರಮಣ ಕೋಲಾರ ನಿರೂಪಿಸಿದರೆ, ಕಾಳಿದಾಸ್ ಸ್ವಾಗತಿಸಿದರು. ಎನ್.ಮುನಿಸ್ವಾಮಿ, ಆದಿಮದ ಹ.ಮಾ.ರಾಮಚಂದ್ರ ಇದ್ದರು.