ಶಿವಮೊಗ್ಗ ಜಿಲ್ಲೆಯಲ್ಲಿ 24 ಮನೆಗಳು ಸಂಪೂರ್ಣ, 129 ಮನೆಗಳು ಭಾಗಶಃ ಹಾನಿ: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ
ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಹಾನಿ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಎನ್.ಡಿ.ಆರ್.ಎಫ್ ಮಾನದಂಡದ ಅಡಿಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿ ತಿಳಿಸಿದ್ದಾರೆ.
ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ 129 ಮನೆಗಳು ಭಾಗಶಃ ಹಾನಿಯಾಗಿವೆ. 24 ಮನೆಗಳು ಸಂಪೂರ್ಣ ಹಾನಿಯಾಗಿವೆ. ಇವುಗಳಿಗೆ ಎನ್.ಡಿ.ಆರ್.ಎಫ್ ಮಾನದಂಡದ ಅಡಿಯಲ್ಲಿ ನೀಡಲಾಗುತ್ತದೆ ಎಂದರು.
ಭಾರಿ ಮಳೆಗೆ ಸಾವು, ನೋವಿನ ಕುರಿತು ವರದಿಯಾಗಿದೆ. ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮೂರು ಜಾನುವಾರುಗಳು ಸಾವನ್ನಪ್ಪಿವೆ. 1 ಜಾನುವಾರು ವಿದ್ಯುತ ಶಾಕ್ ಗೆ ಒಳಗಾಗಿ ಸತ್ತಿದೆ. ಉಳಿದ ಎರಡು ಜಾನವಾರುಗಳು ನೀರಿನಲ್ಲಿ ಮುಳುಗಿವೆ. ಇದಕ್ಕೂ ಕೂಡ ಪರಿಹಾರ ನೀಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಬೆಳೆ ಹಾನಿ ಕುರಿತು ಯಾವುದೆ ವರದಿ ಬಂದಿಲ್ಲ. ಕೆಲವು ಕಡೆ ಜಮೀನು ಜಲಾವೃತವಾದ ವರದಿ ಬಂದಿದೆ. ಆದರೆ ಅದರಿಂದ ಬೆಳೆ ಹಾನಿ ಸಂಭವಿಸುವುದಿಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಅಂಬಾಗುಡ್ಡದಲ್ಲಿ ಗುಡ್ಡ ಕುಸಿತದ ಕುರಿತು ಪರಿಶೀಲನೆ ನಡೆಸುವಂತೆ ತಹಶೀಲ್ದಾರ್ ಅವರಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.