ಗಲ್ಲಿಗೇರಿಸಬೇಕು,ಗುಂಡಿಕ್ಕಬೇಕು; ಪಠ್ಯಪರಿಷ್ಕರಣೆ ವಿರೋಧಿಸಿದ್ದ ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೊಂದು ಬೆದರಿಕೆಪತ್ರ
ಬೆಂಗಳೂರು: ಚಿತ್ರದುರ್ಗದ ಖ್ಯಾತ ಕಾದಂಬರಿಕಾರ ಬಿಎಲ್ ವೇಣು ಅವರಿಗೆ ʼಗಲ್ಲಿಗೇರಿಸಬೇಕು, ಗುಂಡಿಕ್ಕಬೇಕುʼ ಎಂದು ಮತ್ತೊಂದು ಬೆದರಿಕೆ ಪತ್ರ ಬಂದಿರುವುದಾಗಿ ವರದಿಯಾಗಿದೆ.
ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆಯನ್ನು ವಿರೊಧಿಸಿದ್ದ ಹಾಗೂ ವೀರ ಸಾವರ್ಕರ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದ ಕನ್ನಡದ ಕಾದಂಬರಿಕಾರ ಬಿ.ಎಲ್. ವೇಣು ಅವರಿಗೆ ಬೆದರಿಕೆಯ ಪತ್ರ ಬಂದಿದೆ.
ಸಾಹಿತಿಗಳ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ, ಮೇಲ್ಮನೆ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಎಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನೂ ಬೆದರಿಕೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಕಾರ ಗಲ್ಲಿಗೇರಿಸಬೇಕು ಅಥವಾ ಗುಂಡಿಕ್ಕಿ ಹೊಡೆಯಬೇಕು ಎಂದೂ ಬೆದರಿಕೆ ಪತ್ರದಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ.
ಬೆದರಿಕೆ ಪತ್ರವನ್ನು ಅನಾಮಧೇಯ ವ್ಯಕ್ತಿ ಕೈಯಿಂದ ಬರೆದಿರುವುದಾಗಿ ದೃಢವಾಗಿದ್ದು, ಸಾವರ್ಕರ್ ಕುರಿತು ನೀಡಿದ ಹಗುರ ಮಾತಿಗೆ ಕ್ಷಮೆ ಕೇಳಬೇಕು ಎಂದು ಪತ್ರದಲ್ಲಿ ಉಲ್ಲೇಖವಾಗಿದೆ.
ಸಾವರ್ಕರ್ ಬಗ್ಗೆ ನೀವು ಹೀಯಾಳಿಸಿ ಮಾತನಾಡಿದ್ದು ನಿಮಗೆ ಶೋಭೆ ತರಲ್ಲ. ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು 5ನೇ ತರಗತಿ ಪಠ್ಯದಲ್ಲಿ ಹಲವಾರು ವಿಷಯ ತೆಗೆದಿದ್ದಾರೆ. ಬರಗೂರು ಅವರಿಗೆ ಬೆಂಬಲಿಸುವ 61 ಸಾಹಿತಿಗಳನ್ನ ಏನೂ ಮಾಡಬೇಕು? ಪಠ್ಯದಲ್ಲಿ ಭಗವದ್ಗೀತೆ ಅಂಶ ಸೇರಿಸದಂತೆ ಎಲ್ಲರೂ ಸರ್ಕಾರಕ್ಕೆ ಪತ್ರ ನೀಡಿದ್ದರು. ಬಿಎಲ್ ವೇಣು ಅವರೇ ಇಂಥವರಿಗೆ ನೀವು ಬುದ್ದಿ ಹೇಳಿ, ಇಲ್ಲ ಕಾಲನ ಉಪಚಾರಕ್ಕೆ ಸಿದ್ಧರಾಗಿ ಎಂದು ಬೆದರಿಕೆ ಪತ್ರದಲ್ಲಿ ಬರೆಯಲಾಗಿದೆ.
ಬೆದರಿಕೆಯ ಪತ್ರವನ್ನು ಅಂಚೆ ಮೂಲಕ ಕಾದಂಬರಿಕಾರ ಬಿಎಲ್ ವೇಣು ಅವರಿಗೆ ಕಳುಹಿಸಲಾಗಿದೆ.