×
Ad

ನ್ಯೂಟನ್‌ ನಿಯಮ, ಪೈಥಾಗೋರಸ್‌ ಪ್ರಮೇಯ ʼಸುಳ್ಳುಸುದ್ದಿಗಳುʼ: ಕರ್ನಾಟಕ ಎನ್‌ಇಪಿ ಪಠ್ಯ ಪ್ರಸ್ತಾವನೆಯಲ್ಲಿ ಉಲ್ಲೇಖ

Update: 2022-07-11 17:21 IST

ಬೆಂಗಳೂರು: ಸಂಸ್ಕೃತವನ್ನು ತೃತೀಯ ಭಾಷೆಯಾಗಿ ಕಲಿಸುವುದು, ಮನುಸ್ಮೃತಿ ಮತ್ತು ಪ್ರಾಚೀನ ಸಂಖ್ಯಾ ಪದ್ಧತಿಗಳಾದ ಭೂತಸಂಖ್ಯ ಮತ್ತು ಕಟಪಯಾದಿ ಸಾಂಖ್ಯವನ್ನು ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಪರಿಚಯಿಸುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅಡಿಯಲ್ಲಿ ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಕರ್ನಾಟಕ ಕಳುಹಿಸಿರುವ ಪ್ರಸ್ತಾವನೆಯಲ್ಲಿ ಸ್ಥಾನ ಪಡೆದಿದೆ ಎಂದು thenewsminute.com ವರದಿ ಮಾಡಿದೆ. ಭೂತಸಾಂಖ್ಯವು ಸಾಮಾನ್ಯ ನಾಮಪದಗಳನ್ನು ಬಳಸಿಕೊಂಡು ಸಂಸ್ಕೃತದಲ್ಲಿ ಸಂಖ್ಯೆಗಳನ್ನು ದಾಖಲಿಸುವ ವಿಧಾನವಾಗಿದ್ದರೆ, ಸುಲಭವಾಗಿ ನೆನಪಿಡುವ ಸಲುವಾಗಿರುವ ಸಂಖ್ಯೆಗಳ ಸಂಕೇತಗಳು ಕಟಪಯಾದಿ ವಿಧಾನವಾಗಿದೆ.

ರಾಜ್ಯ ಸರ್ಕಾರದ ಕೆಲವು ಪ್ರಸ್ತಾವನೆಗಳ ಬಗ್ಗೆ ರಾಜ್ಯದ ಶಿಕ್ಷಣ ತಜ್ಞರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇನ್‌ಇಪಿ ಅಡಿಯಲ್ಲಿನ ಪಠ್ಯಕ್ರಮಕ್ಕೆ ಸೇರಿಸಲು ಕೇಂದ್ರ ಸರಕಾರಕ್ಕೆ ಈ ಪ್ರಸ್ತಾವನೆಯನ್ನು ಕಳುಹಿಸಿದ್ದು, ಇವುಗಳು ನೂತನ ಪಠ್ಯಕ್ರಮದ ಭಾಗವಾಗುವ ಸಾಧ್ಯತೆಗಳಿವೆ ಎಂದು timesofindia.com ವರದಿ ಮಾಡಿದೆ.

ಕರ್ನಾಟಕವು ಕಳುಹಿಸಿರುವ ಪ್ರಸ್ತಾವನೆಯಲ್ಲಿ, ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಕಡ್ಡಾಯ ಸೇರ್ಪಡೆ ಮಾಡುವ ಕುರಿತು ಉಲ್ಲೇಖಿಸಲಾಗಿದೆ. "ಸಾವಿರಾರು ಭಾಷೆಗಳ ನಾಡಿನಲ್ಲಿ ಕನಿಷ್ಠ ಮೂರು ಭಾಷೆಗಳನ್ನು ಕಲಿಸಬೇಕು. ಪ್ರಾದೇಶಿಕ ಭಾಷೆ, ಇಂಗ್ಲಿಷ್ ಮತ್ತು ಇನ್ನೊಂದು ಭಾರತೀಯ ಭಾಷೆ, ಪ್ರಮುಖವಾಗಿ ಸಂಸ್ಕೃತ. ಸಂಸ್ಕೃತವು ಭಾರತೀಯ ಜ್ಞಾನ ಅತೀಹೆಚ್ಚು ಲಭ್ಯವಿರುವ ಭಾಷೆಯಾಗಿದೆ ಮತ್ತು ಸಂಸ್ಕೃತದ ಮೂಲಭೂತ ಜ್ಞಾನವು ವಿದೇಶಿ ಭಾಷೆಗಳನ್ನು ಒಳಗೊಂಡಂತೆ ಯಾವುದೇ ಇತರ ಭಾಷೆಯನ್ನು ತೆಗೆದುಕೊಳ್ಳಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ" ಎಂದು ಪ್ರಸ್ತಾವನೆಯಲ್ಲಿ ಹೇಳಲಾಗಿದೆ. 

ಪ್ರಸ್ತಾವನೆಯು ಪೈಥಾಗೋರಸ್ ಪ್ರಮೇಯ ಮತ್ತು ನ್ಯೂಟನ್‌ನ ತಲೆಯ ಮೇಲೆ ಸೇಬು ಬೀಳುವ ವಿಚಾರವನ್ನು 'ನಕಲಿ ಸುದ್ದಿ' ಎಂದು ಕರೆದಿದೆ. "ಪಠ್ಯಪುಸ್ತಕಗಳು (ಅಥವಾ ಮುದ್ರಣ/ಎಲೆಕ್ಟ್ರಾನಿಕ್/ಸಾಮಾಜಿಕ ಮಾಧ್ಯಮ) ಹೇಳುವ ಯಾವುದೇ ತಪ್ಪುಗಳನ್ನು ತಪ್ಪೇ ಇಲ್ಲದ ಸತ್ಯವೆಂದು ಒಪ್ಪಿಕೊಳ್ಳದೆ ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸಬೇಕಾಗಿದೆ. ಪೈಥಾಗೋರಸ್ ಪ್ರಮೇಯ ಮತ್ತು ನ್ಯೂಟನ್‌ನ ತಲೆಯ ಮೇಲೆ ಸೇಬು ಬೀಳುವ ನಕಲಿ ಸುದ್ದಿಗಳನ್ನು ಸೃಷ್ಟಿಸಿ ಪ್ರಚಾರ ಮಾಡಲಾಗುತ್ತಿದೆ" ಎಂದೂ ಉಲ್ಲೇಖಿಸಲಾಗಿದೆ. 

"ಯುರೋಪ್‌ ಮೂಲದ ಗಣಿತವನ್ನು ಬಿಟ್ಟು ಪ್ರಾಚೀನ ಭಾರತದ ಗಣಿತ ಪರಿಕಲ್ಪನೆಗಳನ್ನು ಸಂಯೋಜನೆ ಮಾಡಬೇಕು. ವೇಗವಾಗಿ ಮನಸ್ಸಿನಲ್ಲೇ ಲೆಕ್ಕಾಚಾರಗಳನ್ನು ಮಾಡಲು ವೈದಿಕ ಗಣಿತದ ಕೆಲವು ಸೂತ್ರಗಳನ್ನು ಪರಿಚಯಿಸಲು ಪ್ರಸ್ತಾವನೆಯು ಶಿಫಾರಸು ಮಾಡಿದೆ. ಪ್ರಸ್ತಾವನೆಯಲ್ಲಿನ ಮತ್ತೊಂದು ಸಲಹೆಯು ಗ್ರೀಕ್ ಗಣಿತಜ್ಞರಾದ ಪೈಥಾಗೊರಸ್ ಮತ್ತು ಹೆರಾನ್ ಅವರ ಮುಖಗಳ ಚಿತ್ರಣವನ್ನು ತೆಗೆದುಹಾಕಲು ಸಲಹೆ ನೀಡಿದ್ದು, ಭಾರತೀಯ ರೇಖಾಗಣಿತದ ಉದಾಹರಣೆಯನ್ನೂ ನೀಡಿದೆ. "ಭಾರತೀಯ ರೇಖಾಗಣಿತದ ಪಠ್ಯಪುಸ್ತಕಗಳಲ್ಲಿ ನೀಡಲಾದ ಕೆಲವು ಉದಾಹರಣೆಗಳನ್ನು ತರಗತಿಯ ಹೊರಗೆ, ಬಹುಶಃ ಆಟದ ಮೈದಾನದಲ್ಲಿ ಮಾಡಬಹುದು ಎಂದು ಶಿಫಾರಸು ಮಾಡಲಾಗಿದೆ. ಗ್ರೀಕ್ ಗಣಿತಶಾಸ್ತ್ರದ ವಿಭಾಗಗಳನ್ನು ಕಡಿಮೆಗೊಳಿಸಬೇಕಾಗಿದೆ, ವಿಶೇಷವಾಗಿ "ಗ್ರೀಕ್ ಗಣಿತಜ್ಞರ" ಮುಖಗಳ ಚಿತ್ರಣಗಳು. ಉದಾಹರಣೆಗೆ ಪೈಥಾಗರಸ್, ಹೆರಾನ್ ಇತ್ಯಾದಿ," ಎಂದು ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.

ವಿಜ್ಞಾನ ಕ್ಷೇತ್ರದಲ್ಲಿ ಮಧ್ಯಕಾಲೀನ ಭಾರತೀಯ ಕೊಡುಗೆಗಳನ್ನು ಸೇರಿಸುವುದನ್ನು ಉಲ್ಲೇಖಿಸಿದ ಪ್ರಸ್ತಾವನೆಯು ಋಗ್ವೇದವು ಭೂಗ್ರಹದಲ್ಲೇ ಅತ್ಯಂತ ಹಳೆಯ ಮತ್ತು ಜೀವಂತ ಸಾಹಿತ್ಯವೆಂದು ಸರ್ವರಿಂದಲೂ ಅಂಗೀಕರಿಸಲ್ಪಟ್ಟಿದೆ ಎಂದಿದೆ. ಮಹಾತ್ಮ ಗಾಂಧಿ, ಬಿಆರ್ ಅಂಬೇಡ್ಕರ್ ಮತ್ತು ನೆಹರು ಅವರ ಕುರಿತಾದ ಪಾಠಗಳನ್ನು ತೆಗೆದುಹಾಕುವುದರ ಜೊತೆಗೆ ಆರ್‌ಎಸ್‌ಎಸ್ ವಿಚಾರವಾದಿಗಳಾದ ಕೆಬಿ ಹೆಡ್ಗೆವಾರ್ ಮತ್ತು ವಿನಾಯಕ ದಾಮೋದರ್ ಸಾವರ್ಕರ್ ಅವರ ಕುರಿತಾದ ಪಾಠಗಳನ್ನು ಸೇರಿಸಿದ ರಾಜ್ಯ ಸರ್ಕಾರವು ಕರ್ನಾಟಕದಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಮಾಡಿದ ಬದಲಾವಣೆಗಳ ವಿವಾದದ ನಡುವೆಯೇ ಈ ಪ್ರಸ್ತಾಪವು ಬಂದಿದೆ.

ಕೃಪೆ: Thenewsminute.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News