×
Ad

ನಾರಾಯಣ ಗುರುಗಳ ಪಠ್ಯ ಮೊದಲಿದ್ದಂತೆಯೇ ಇರಲಿ: ಬಿ.ಸಿ ನಾಗೇಶ್‍ಗೆ ಪತ್ರ ಬರೆದ ಸಚಿವ ಸುನೀಲ್ ಕುಮಾರ್

Update: 2022-07-11 20:11 IST

ಬೆಂಗಳೂರು, ಜು.11: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನದಿಂದ ತೆಗೆದು ಕನ್ನಡ ಭಾಷಾ ಪಠ್ಯಕ್ಕೆ ಸೇರಿಸಲಾಗಿದೆ. ಅದನ್ನು ಸಮಾಜ ವಿಜ್ಞಾನ ವಿಷಯಕ್ಕೆ ಮರಳಿ ವರ್ಗಾಹಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನೀಲ್ ಕುಮಾರ್ ಅವರು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪತ್ರವನ್ನು ಬರೆದಿದ್ದಾರೆ. 

ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯಪರಿಷ್ಕರಣೆಯಾಗಿದ್ದು, ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ವರ್ಗಾಹಿಸಿರುವುದರಿಂದ ಗೊಂದಲಗಳು ನಿರ್ಮಾಣವಾಗಿವೆ. ಬ್ರಹ್ಮ ಶ್ರೀ ನಾರಾಯಣ ಗುರುಗಳ ವಿಷಯಗಳು ಈ ಹಿಂದೆ ಸಮಾಜ ವಿಜ್ಞಾನ ವಿಷಯದಲ್ಲಿ ಇತ್ತು, ಅದನ್ನು ಎಲ್ಲಾ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದರು. ಈ ವರ್ಷದಿಂದ ಅದನ್ನು ಕನ್ನಡ ಭಾಷ ಪಠ್ಯಕ್ಕೆ ವರ್ಗಾಹಿಸಲಾಗಿದೆ. ಕೆಲವರಷ್ಟೇ ಓದುತ್ತಾರೆ ಎಂಬ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ ಎಂದು ತಿಳಿಸಿದ್ದಾರೆ. 

ಕನ್ನಡದ ಬದಲು ಸಮಾಜ ವಿಜ್ಞಾನದಲ್ಲಿದ್ದರೆ ಎಲ್ಲಾ ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಅಲ್ಲದೆ ಸರ್ವ ಸಮ್ಮತವೂ ಆಗಿದೆ. ಆದರೆ ಕನ್ನಡ ಭಾಷಾ ವಿಷಯವನ್ನು ಎಲ್ಲರೂ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಇದರಿಂದ ಬೇರೆ ಭಾಷಾ ಮಾಧ್ಯಮದ ವಿದ್ಯಾರ್ಥಿಗಳು ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯದಿಂದ ವಂಚಿತರಾಗಲಿದ್ದಾರೆ. ಹಾಗಾಗಿ ನಾರಾಯಣ ಗುರುಗಳ ತತ್ವ ಆದರ್ಶಗಳು ಎಲ್ಲಾ ಮಕ್ಕಳಿಗೆ ತಿಳಿಸಲು ಸಮಾಜ ವಿಜ್ಞಾನ ವಿಷಯಕ್ಕೆ ವರ್ಗಾಹಿಸಲು ಆದಷ್ಟು ಬೇಗ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. 

ಅಗತ್ಯ ಕ್ರಮ ಕೈಗೊಳ್ಳಲಾಗುವುದು: ಸಚಿವ ನಾಗೇಶ್

ಸಚಿವ ವಿ. ಸುನೀಲ್ ಕುಮಾರ್ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿದ್ದು, ಅದರ ಬದಲು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸಲು ಕೋರಿದ್ದಾರೆ. ಅದರಂತೆ ಕನ್ನಡ ವಿಷಯದಲ್ಲಿರುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕೈಬಿಟ್ಟು, ಈ ಹಿಂದೆ ಇದ್ದಂತೆ ಬ್ರಹ್ಮ ಶ್ರೀ ನಾರಾಯಣ ಗುರುಗಳ ಕುರಿತಾದ ಪಾಠವನ್ನು ಸಮಾಜ ವಿಜ್ಞಾನ ವಿಷಯದ ಪಠ್ಯಪುಸ್ತಕದಲ್ಲಿ ತಕ್ಷಣವೇ ಅಳವಡಿಸಲು ಸರಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News