ರಾಜ್ಯದಲ್ಲಿ ಮಳೆ ಹಿನ್ನೆಲೆ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟ

Update: 2022-07-11 15:25 GMT

ಬೆಂಗಳೂರು, ಜು.11: ರಾಜ್ಯದ ಬಹುತೇಕ ಕಡೆಗಳಲ್ಲಿ ಕಳೆದ ಕೆಲವು ತಿಂಗಳಿನಿಂದ ತೀವ್ರವಾಗಿ ಮಳೆಯುಂಟಾಗುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ಪ್ರಕಟಿಸಿದೆ.

ತೀವ್ರ ಮಳೆಯಿಂದಾಗಿ ಶಿಥಿಲಾವಸ್ಥೆಯಲ್ಲಿರುವ ಕೆಲವು ಶಾಲಾ ಕಟ್ಟಡಗಳು, ಯಾವುದೇ ಸಂದರ್ಭದಲ್ಲಿ ಹಾನಿಗೊಳಗಾಗುವ ಅಥವಾ ಬಿದ್ದು ಹೋಗುವ ಸಂಭವವಿರುತ್ತದೆ. ಹಾಗಾಗಿ ಅಂತಹ ಶಾಲಾ ಕಟ್ಟಡಗಳನ್ನು ಬಳಸದೆ, ಸಮೀಪದ ಸುಸ್ಥಿತಿಯಲ್ಲಿರುವ ಕಟ್ಟಡಗಳನ್ನು ಬಳಸಬೇಕು. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ತೀವ್ರತೆಯನ್ನು ಪರಿಗಣಿಸಿ ತೆರವುಗೊಳಿಸಲು ಅಥವಾ ನೆಲಸಮಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾರ್ಗಸೂಚಿ ಹೊರಡಿಸಿದೆ.

ಮಳೆಯಿಂದಾಗಿ ಮಕ್ಕಳಿಗೆ ಕೆಮ್ಮು, ನೆಗಡಿ, ಜ್ವರ ಹಾಗೂ ಇನ್ನಿತರೆ ಲಕ್ಷಣಗಳು ಕಂಡು ಬಂದಲ್ಲಿ ಕೋವಿಡ್-19ರ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಸೂಚಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು.

ಕೆಲವೆಡೆ ತೀವ್ರ ಮಳೆಯಿಂದಾಗಿ ಪ್ರವಾಹ ಅಥವಾ ನೆರೆ ಬಂದು ವಿದ್ಯಾರ್ಥಿಗಳು, ಶಾಲೆಗಳಿಗೆ ಬಂದು-ಹೋಗಲು ತೊಂದರೆಯುಂಟಾಗುವ ಅಥವಾ ಕೆಲವು ಸಂದರ್ಭಗಳಲ್ಲಿ ಮಳೆಯಿಂದಾಗಿ ಶಾಲೆಗಳ ಕೊಠಡಿಗಳಲ್ಲಿ ನೀರು ಸಂಗ್ರಹವಾಗುವ ಸಂಭವವಿರುತ್ತದೆ. ಇಂತಹ ಸಂದರ್ಭಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆಗಳ ಸಹಕಾರದಿಂದ ಶಾಲಾ ಕಟ್ಟಡದಲ್ಲಿ ಸಂಗ್ರಹವಾಗಿರುವ ನೀರನ್ನು ತೆರವುಗೊಳಿಸಬೇಕು. ಅಗತ್ಯಾನುಸಾರ ಜಿಲ್ಲಾ ಉಪನಿರ್ದೇಶಕರ ಪೂರ್ವಾನುಮತಿ ಪಡೆದು ಶಾಲೆಗಳಿಗೆ ರಜೆಯನ್ನು ಘೋಷಿಸಬೇಕು. ಅಂತಹ ರಜಾ ದಿನಗಳಲ್ಲಿನ ಪಾಠ ಪ್ರವಚನಗಳನ್ನು ಮುಂದಿನ ಸರಕಾರಿ ರಜಾ ದಿನಗಳಲ್ಲಿ ಸರಿದೂಗಿಸುವಂತೆ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News