ವರ್ಗಾವಣೆಯ ಪರೋಕ್ಷ ಬೆದರಿಕೆ ಕುರಿತ ಹೇಳಿಕೆಯನ್ನು ಆದೇಶದಲ್ಲಿ ಉಲ್ಲೇಖಿಸಿದ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ
ಬೆಂಗಳೂರು: ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ತನಿಖೆ ನಡೆಸುತ್ತಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ತನ್ನ ಮಧ್ಯಪ್ರವೇಶದ ಬಳಿಕ ತನಗೆ ವರ್ಗಾವಣೆಯ ಪರೋಕ್ಷ ಬೆದರಿಕೆ ಬಂದಿರುವ ಕುರಿತು ಮತ್ತು ಎಸಿಬಿ ಮುಖ್ಯಸ್ಥರ ಕಾರ್ಯವೈಖರಿ ವಿರುದ್ಧ ಹೇಳಿಕೆ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರು ಸೋಮವಾರ ತಮ್ಮ ಹೇಳಿಕೆಯನ್ನು ಆದೇಶದಲ್ಲಿ ಪುನರುಚ್ಚರಿಸಿದ್ದಾರೆ.
ನ್ಯಾಯಮೂರ್ತಿ ಎಚ್‌ಪಿ ಸಂದೇಶ್ ಅವರು ಸೋಮವಾರ ನೀಡಿರುವ ಮಧ್ಯಂತರ ಆದೇಶದಲ್ಲಿ ಕರ್ನಾಟಕ ಮುಖ್ಯ ಕಾರ್ಯದರ್ಶಿ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಸಾರ್ವಜನಿಕ ಹಿತಾಸಕ್ತಿ ಒಳಗೊಂಡಿರುವ ಹುದ್ದೆಗಳಿಗೆ ಕಳಂಕಿತ ಅಧಿಕಾರಿಗಳನ್ನು ನೇಮಿಸದಂತೆ ಸೂಚಿಸಿದ್ದಾರೆ. ಅಂತಹ ಸ್ಥಾನಕ್ಕೆ ನೇಮಕಗೊಂಡ ಯಾವುದೇ ವ್ಯಕ್ತಿ "ವಿಶ್ವಾಸಾರ್ಹತೆಯನ್ನು ಹೊಂದಿರಬೇಕು ಮತ್ತು ಸಂಸ್ಥೆಯನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬೇಕು" ಎಂದು ಅವರು ಹೇಳಿದ್ದಾರೆ.
ಎಸಿಬಿ ಮುಖ್ಯಸ್ಥ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅವರ ಸೇವಾ ದಾಖಲೆಯನ್ನು ಉಲ್ಲೇಖಿಸಿ ನ್ಯಾಯಾಲಯ ಈ ಆದೇಶ ನೀಡಿದೆ ಎಂದು indianexpress.com ವರದಿ ಮಾಡಿದೆ. ಸೀಮಂತ್ ಕುಮಾರ್ ಸಿಂಗ್ 2009-10ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಾಗ ಅಕ್ರಮ ಗಣಿಗಾರಿಕೆ ದಂಧೆಗೆ ಸಂಬಂಧಿಸಿದಂತೆ ಸಿಬಿಐಯಿಂದ ಭ್ರಷ್ಟಾಚಾರದ ತನಿಖೆ ಎದುರಿಸಿದ್ದರು.
ಜುಲೈ 4 ರಂದು ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಬೆದರಿಕೆಯನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ಸಂದೇಶ್, ಸೋಮವಾರದಂದು ಲಿಖಿತ ಆದೇಶವನ್ನು ನೀಡಿದ್ದಾರೆ. ಜುಲೈ 1 ರಂದು ಕರ್ನಾಟಕದ ಮಾಜಿ ಮುಖ್ಯ ನ್ಯಾಯಮೂರ್ತಿ ಋತು ರಾಜ್ ಅವಸ್ತಿಯವರಿಗೆ ಬೀಳ್ಕೊಡುಗೆ ಔತಣಕೂಟದಲ್ಲಿ ತನ್ನ ಬಳಿ ಬಂದ ಸಹ ನ್ಯಾಯಾಧೀಶರೊಬ್ಬರು ವರ್ಗಾವಣೆಯ ಸುಳಿವಿನ ಬಗ್ಗೆ ಎಚ್ಚರಿಸಿದ್ದರು ಎಂದು ಜುಲೈ 4 ರಂದು ನಡೆದ ವಿಚಾರಣೆ ವೇಳೆ ನ್ಯಾ. ಸಂದೇಶ್ ಹೇಳಿದ್ದರು.