×
Ad

ಎಸಿಬಿಗೆ ಕಳಂಕಿತ ಅಧಿಕಾರಿಗಳ ನೇಮಕ ಬೇಡ: ಹೈಕೋರ್ಟ್

Update: 2022-07-11 22:07 IST

ಬೆಂಗಳೂರು, ಜು.11: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಕಳಂಕಿತ ಅಧಿಕಾರಿಗಳನ್ನು ನಿಯೋಜನೆ ಮಾಡಬೇಡಿ ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದಲ್ಲಿ ಆರೋಪಿಯಾಗಿರುವ ಉಪ ತಹಶೀಲ್ದಾರ್ ಸಲ್ಲಿಸಿರುವ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸೋಮವಾರ ಈ ನಿರ್ದೇಶನ ನೀಡಿತು.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅಧಿಕಾರಿಗಳನ್ನು ನೇಮಿಸುವಾಗ ಮೊದಲು ಸಾರ್ವಜನಿಕ ಹಿತಾಸಕ್ತಿ ಗಮನಿಸಬೇಕು. ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲೆಂದೇ ಎಸಿಬಿಯನ್ನು ರಚಿಸಲಾಗಿದೆ. ಎಸಿಬಿಗೆ ಅಧಿಕಾರಿಯಾಗುವವರಿಗೆ ವಿಶ್ವಾಸಾರ್ಹತೆ ಬಹುಮುಖ್ಯವಾಗುತ್ತದೆ. ಎಸಿಬಿ ಘನತೆಯನ್ನು ಕಾಪಾಡುವ ಹಾಗೂ ಉನ್ನತ ಸ್ಥಾನಕ್ಕೆ ಒಯ್ಯುವ ಕ್ಷಮತೆ ಇರಬೇಕು. ಸರ್ವೀಸ್ ರೆಕಾರ್ಡ್, ಅಧಿಕಾರಿಯ ಸಮಗ್ರತೆಯನ್ನು ಪರಿಗಣಿಸಬೇಕೆಂದು ನ್ಯಾಯಪೀಠವು ಸರಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ... ವರ್ಗಾವಣೆಯ ಪರೋಕ್ಷ ಬೆದರಿಕೆ ಕುರಿತ ಹೇಳಿಕೆಯನ್ನು ಆದೇಶದಲ್ಲಿ ಉಲ್ಲೇಖಿಸಿದ ಕರ್ನಾಟಕ  ಹೈಕೋರ್ಟ್ ನ್ಯಾಯಾಧೀಶ 

ಎಸಿಬಿಗೆ ಅಧಿಕಾರಿಗಳನ್ನು ನೇಮಿಸುವಾಗ ಆಂತರಿಕ, ಬಾಹ್ಯ ಪ್ರಭಾವಕ್ಕೆ ಒಳಗಾಗದೇ ನೇಮಕ ಮಾಡಬೇಕು. ಇಂಥ ಅಧಿಕಾರಿಗಳ ಹಾಗೂ ಅವರ ಕುಟುಂಬದವರ ವಿರುದ್ಧವೂ ಎಸಿಬಿ, ಲೋಕಾಯುಕ್ತ ತನಿಖೆ ನಡೆಯುತ್ತಿರಬಾರದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಡಿಪಿಎಆರ್ ಕಾರ್ಯದರ್ಶಿಗೆ ನ್ಯಾಯಪೀಠವು ಸೂಚನೆ ನೀಡಿತು. 

ಸಿಬಿಐ ಪರ ವಕೀಲ ಪ್ರಸನ್ನಕುಮಾರ್ ಅವರು, ಎಸಿಬಿ ಎಡಿಜಿಪಿ ಸೀಮಂತ್‍ಕುಮಾರ್‍ಸಿಂಗ್ ವಿರುದ್ಧದ ಸಿಬಿಐ ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ನ್ಯಾಯಪೀಠಕ್ಕೆ ವಿವರಣೆ  ನೀಡಿದರು ಹಾಗೂ ಸೀಮಂತ್‍ಕುಮಾರ್ ಸಿಂಗ್ ವಿರುದ್ಧ ಆರೋಪಗಳಿರುವ ಹಿನ್ನೆಲೆಯಲ್ಲಿ ಪೀಠಕ್ಕೆ ಮೆಮೊ ದಾಖಲಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸೀಮಂತ್‍ಕುಮಾರ್‍ಸಿಂಗ್ ಅವರ ವಿರುದ್ಧ ದಾಳಿ ನಡೆಸಲಾಗಿತ್ತೆ ಎಂದು ಸಿಬಿಐ ಪರ ವಕೀಲರನ್ನು ಅವರನ್ನು ಪ್ರಶ್ನಿಸಿತು. ಅಧಿಕಾರಿಗಳ ವಿರುದ್ಧ ತನಿಖೆಗೆ ಮನವಿ ಮಾಡಲಾಗಿತ್ತು ಎಂದು ವಕೀಲರು ಪೀಠಕ್ಕೆ ತಿಳಿಸಿದರು. 

ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ಅವರು, ಸೀಮಂತ್‍ಕುಮಾರ್‍ಸಿಂಗ್ ಪರವಾಗಿ ಯಾವುದೇ ಅರ್ಜಿ ಸಲ್ಲಿಸದೇ ವಾದಕ್ಕೆ ಮುಂದಾದಾಗ, ನ್ಯಾಯಪೀಠವು ವಾದಕ್ಕೆ ಅವಕಾಶ ನೀಡದೇ ತಳ್ಳಿ ಹಾಕಿತು. 

ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಅಧಿಕಾರ ನೀಡುವಂತೆ ವಾದ ಮಂಡಿಸುತ್ತಿರುವ ಅಶೋಕ್ ಹಾರನಹಳ್ಳಿ ನ್ಯಾಯಪೀಠದ ಮುಂದೆ ಎಸಿಬಿ ಎಡಿಜಿಪಿ ಪರ ವಾದ ಮಂಡನೆ ಮುಂದಾಗಿರುವುದು ಸೂಕ್ತವಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿತು. 

ಎಸಿಬಿ ಪರ ವಾದಿಸಿದ ವಕೀಲರು, ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಅವರು ತಮ್ಮ ವಿರುದ್ಧ ಯಾವುದೇ ಟೀಕೆ ಮಾಡದಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪೀಠಕ್ಕೆ ಮಾಹಿತಿ ನೀಡಿದರು. 

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಅಧಿಕಾರಿಯ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಮೂರ್ತಿಗಳು, ತಮಗೆ ಬಂದ ಬೆದರಿಕೆಯ ಬಗ್ಗೆಯೂ ಪ್ರಸ್ತಾಪಿಸಿದರು. ಸಿಜೆ ಆಗಿದ್ದ ರಿತುರಾಜ್ ಆವಸ್ಥಿ ಅವರ ಬೀಳ್ಕೋಡುಗೆ ಸಮಾರಂಭದಲ್ಲಿ ನಾಯಾಮೂರ್ತಿಯೊಬ್ಬರು ಹೇಳಿದ ವಿಷಯ ಪ್ರಸ್ತಾಪಿಸಿದರು. 

ಜು.1ರಂದು ರಾತ್ರಿ ಭೋಜನದ ಸಮಯದಲ್ಲಿ ಹಾಲಿ ನ್ಯಾಯಮೂರ್ತಿಯೊಬ್ಬರು ಬಂದು ನನ್ನ ಪಕ್ಕದಲ್ಲಿ ಕುಳಿತರು. ಹೊಸದಿಲ್ಲಿಯಿಂದ ನನಗೆ ಒಂದು ಕರೆ ಬಂದಿದೆ, ಆ ವೇಳೆ ನಿಮ್ಮ ವಿಚಾರಿಸಿದ್ದರು ಎಂದು ಹೇಳಿದರು. ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ ಎಂದು ಹೇಳಿದೆ. 
ಅಲ್ಲದೆ, ಆ ಎಡಿಜಿಪಿ ಉತ್ತರ ಭಾರತದಿಂದ ಬಂದವರು ಬಹಳ ಪ್ರಭಾವಿ ಎಂದು ತಿಳಿಸಿದ ಅವರು, ನ್ಯಾಯಮೂರ್ತಿಯೊಬ್ಬರ ವರ್ಗಾವಣೆ ವಿಚಾರವನ್ನೂ ಹೇಳಿದರು ಎಂದು ನ್ಯಾಯಮೂರ್ತಿ ನ್ಯಾ.ಎಚ್.ಪಿ.ಸಂದೇಶ್ ಉಲ್ಲೇಖಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಜು.13ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News