×
Ad

ನಿಗಮ-ಮಂಡಳಿಗಳ ಬದಲಾವಣೆಗೆ ಕ್ರಮ: ಸಿಎಂ ಬೊಮ್ಮಾಯಿ

Update: 2022-07-12 11:22 IST

ಮೈಸೂರು, ಜು.12: ನಿಗಮ-ಮಂಡಳಿಗಳಲ್ಲಿ ಒಂದೂವರೆ ವರ್ಷ ಅಧಿಕಾರ ಪೂರೈಸಿರುವವರನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಅದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಹೊಸಬರಿಗೂ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಅನಾಹುತ ಸಂಭವಿಸಿರುವ ಸ್ಥಳಗಳಿಗೆ ಭೇಟಿ ನೀಡಲು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ‌ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಮಂಗಳವಾರ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಸದ್ಯಕ್ಕೆ ಯಾರಿಂದಲೂ ರಾಜೀನಾಮೆ ಕೇಳಿಲ್ಲ. ಈಗಾಗಲೇ ನಮ್ಮ ಬಿಜೆಪಿ ಕೋರ್ ಕಮಿಟಿ ತೀರ್ಮಾನದಂತೆ ಈ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಳೆ ಹಾನಿ ಬಗ್ಗೆ ಇಂದು ಸಂಜೆಯೊಳಗೆ ಸಂಪೂರ್ಣ ಚಿತ್ರಣ ಲಭ್ಯ

ರಾಜ್ಯದಲ್ಲಿ ಮಳೆ ಹಾನಿಯಿಂದ ಉಂಟಾಗಿರುವ ನಷ್ಟದ ಬಗ್ಗೆ ಸಮೀಕ್ಷೆ ನಡೆಯುತ್ತಿದ್ದು, ನಷ್ಟದ ಪ್ರಮಾಣ ಎಷ್ಟೆಂಬುದರ ಬಗ್ಗೆ ನಿಖರ ಮಾಹಿತಿಯನ್ನು ಇಂದು ಸಂಜೆ ಮಾಧ್ಯಮಗಳ ಮೂಲಕ ಜನರಿಗೆ ತಿಳಿಸಲಾಗುವುದು. ಪ್ರಕೃತಿ ವಿಕೋಪ ನಿದಿಯಡಿಯಲ್ಲಿ 739 ಕೋಟಿ ರೂ.ವಿದ್ದು, ಪರಿಹಾರಧನ ನೀಡಲು ಸದ್ಯಕ್ಕೆ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರಾಜ್ಯದ ಹಲವು ಕಡೆಗಳಲ್ಲಿ ಬಾರೀ ಪ್ರಮಾಣದಲ್ಲಿ ಮಳೆಯಾಗಿರುವ ಪರಿಣಾಮ ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಹಾಗೆ ಮನೆಗಳು ಹಾನಿಗೀಡಾಗಿವೆ. ಕೊಡಗಿನಲ್ಲಿ ಭೂಕುಸಿತ ಸಂಭವಿಸಿದೆ. ಆ ಸ್ಥಳಕ್ಕೆ ಈಗ ನಾನು ಭೇಟಿ ನೀಡುತ್ತಿದ್ದೇನೆ. ಉತ್ತರ ಪ್ರದೇಶದ ನದಿ ದಡದಲ್ಲಿರುವ ಅನೇಕ ಮನೆಗಳು ಕುಸಿದಿವೆ. ಒಟ್ಟಾರೆ ರಾಜ್ಯದಲ್ಲಿ ಸಂಭವಿಸಿರುವ ಅನಾಹುತಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಸಂಪೂರ್ಣ ಚಿತ್ರಣ ಸಂಜೆಯೊಳಗೆ ಗೊತ್ತಾಗಲಿದೆ ಎಂದು ಹೇಳಿದರು.

ಈಗಾಗಲೆ ನದಿ ದಡದಲ್ಲಿ ಮುಳುಗಡೆಯಾಗಿರುವ ಮನೆಗಳನ್ನು ಮತ್ತು ಊರುಗಳ ಜನರನ್ನು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಲಹೆ ಕೇಳಿದ್ದು, ಅವರ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರವಾಹ ಸ್ಥಳಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡುತ್ತಿಲ್ಲ ಎಂಬುದು ಶುದ್ಧ ಸುಳ್ಳು, ಈಗಾಗಲೇ ನಮ್ಮ ಸಚಿವರು ಕಾರ್ಯಪ್ರವೃತ್ತರಾಗಿ ಕೆಲಸ ಮಾಡುತ್ತಿದ್ದಾರೆ. ಉಡುಪಿಯಲ್ಲಿ ಅಂಗಾರ, ಮಂಗಳೂರಿನಲ್ಲಿ ಸುನೀಲ್ ಕುಮಾರ್, ಉತ್ತರ ಕನ್ನಡದಲ್ಲಿ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಎಲ್ಲಾ ರೀತಿಯ ಕ್ರಮಕೈಗೊಂಡಿದ್ದಾರೆ. ನಮ್ಮ ಕಂದಾಯ ಸಚಿವ ಆರ್.ಅಶೋಕ್ ಕೂಡ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಅಗತ್ಯಕ್ರಮ‌ಕ್ಕೆ ಸೂಚಿಸಿದ್ದಾರೆ. ‌ಸೋಮವಾರ ಶಿರಾಡಿ ಘಾಟ್ ಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿದ್ದಾರೆ. ಒಟ್ಟಾರೆ ನಮ್ಮ ಸಚಿವರುಗಳು ಅಧಿಕಾರಿಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾನು ಕೂಡ ಹಾನಿ ಸಂಭವಿಸಿರುವ ಸ್ಥಳಗಳಿಗೆ  ಭೇಟಿ ನೀಡಿ ಪ್ರಾಣ ಹಾನಿ, ಆಸ್ತಿ ನಷ್ಟದ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಪ್ರಕೃತಿ ವಿಕೋಪ ನಿಧಿಯಡಿಯಲ್ಲಿ ತಕ್ಷಣ ಪರಿಹಾರ ಕೈಗೊಳ್ಳುವಂತೆ ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು  ಜಿಲ್ಲಾಡಳಿತಕ್ಕೆ  ಸೂಚನೆ ನೀಡುತ್ತೇನೆ. ಇಂತಹ ಸಂಕಷ್ಟ ಕಾಲದಲ್ಲಿ ಸರ್ಕಾರ ಜನರ ಜೊತೆಗೆ ನಿಲ್ಲುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News