ಕನ್ನಡ ಭಾಷೆಯ ನಾರಾಯಣಗುರು ಪಠ್ಯವನ್ನು ಮತ್ತೆ ಸಮಾಜ ವಿಜ್ಞಾನ ವಿಷಯಕ್ಕೆ ವರ್ಗಾಯಿಸಿ ಆದೇಶ
ಬೆಂಗಳೂರು, ಜು.12: ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯಪರಿಷ್ಕರಣೆಯ ಸಮಿತಿಯು ಹತ್ತನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಶ್ರೀ ನಾರಾಯಣಗುರು ವಿಷಯಾಂಶವನ್ನು ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕಕ್ಕೆ ವರ್ಗಾಯಿಸಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕನ್ನಡ ಭಾಷೆ ವಿಷಯದಿಂದ ಪುನಃ ಸಮಾಜ ವಿಜ್ಞಾನಕ್ಕೆ ಶ್ರೀ ನಾರಾಯಣಗುರು ಪಠ್ಯ ವರ್ಗಾಹಿಸಿ ಸರಕಾರವು ಮಂಗಳವಾರ ಆದೇಶ ಹೊರಡಿಸಿದೆ.
10ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕದಲ್ಲಿ ಇರುವ ಶ್ರೀ ನಾರಾಯಣಗುರು ಅವರ ವಿಷಯಾಂಶಗಳನ್ನು 2022-23ನೇ ಸಾಲಿಗೆ ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನದಿಂದ ಕೈ ಬಿಟ್ಟು, ಹಿಂದಿನಂತೆ ಹತ್ತನೇ ತರಗತಿ ಸಮಾಜ ವಿಜ್ಞಾನ ಭಾಗ-1ರಲ್ಲಿ ಅಳವಡಿಸಿಕೊಂಡು ಬೋಧನೆ, ಕಲಿಕೆ ಹಾಗೂ ಮೌಲ್ಯಮಾಪನಕ್ಕೆ ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ.
ಹಾಗೆಯೇ 2023-24ನೇ ಸಾಲಿಗೆ ಪ್ರಸ್ತುತ 10ನೇ ತರಗತಿಯ ಕನ್ನಡ ಪ್ರಥಮ ಭಾಷಾ ಪಠ್ಯದಲ್ಲಿ ಇರುವ ಶ್ರೀ ನಾರಾಯಣಗುರು ಅವರ ವಿಷಾಯಾಂಶವನ್ನು ಕೈಬಿಟ್ಟು 2023-24ನೇ ಸಾಲಿಗೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಅಳವಡಿಸಲಾಗುವುದು ಎಂದು ಉಲ್ಲೇಖಿಸಲಾಗಿದೆ.
ಪರಿಷ್ಕರಣೆಯಲ್ಲಿ ಶ್ರೀ ನಾರಾಯಣಗುರು ಅವರ ವಿಷಾಯಾಂಶವನ್ನು ಕೈಬಿಡಲಾಗಿತ್ತು ಎಂದು ವಿರೋಧ ವ್ಯಕ್ತವಾಗಿತ್ತು. ಸಮಿತಿಯು ಅದನ್ನು ಕನ್ನಡ ಭಾಷೆಗೆ ವರ್ಗಾಹಿಸಲಾಗಿದೆ ಎಂದು ತಿಳಿಸಿತ್ತು. ಕನ್ನಡ ಭಾಷೆಯಲ್ಲಿ ನಾರಾಯಣಗುರುಗಳ ಪಾಠ ಇದ್ದರೆ, ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ತಲುಪುತ್ತದೆ. ಹಿಂದಿನಂತೆ ಸಮಾಜ ವಿಜ್ಞಾನದಲ್ಲಿ ಅವರ ಪಾಠ ಇದ್ದರೆ ಎಲ್ಲಾ ವಿದ್ಯಾರ್ಥಿಗಳು ಓದುತ್ತಾರೆ ಎಂದು ಸಚಿವ ವಿ. ಸುನೀಲ್ ಕುಮಾರ್ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು. ಹಾಗಾಗಿ ಸರಕಾರ ಆದೇಶ ಹೊರಡಿಸಿದೆ.