ನಿವೃತ್ತಿ ವಯಸ್ಸು ಏರಿಕೆಗೆ ಅಸ್ತು ಎಂದ ಹೈಕೋರ್ಟ್
Update: 2022-07-12 21:13 IST
ಧಾರವಾಡ, ಜು.12: ಖಾಸಗಿ ವಲಯದ ನೌಕರರ ನಿವೃತ್ತಿಯ ವಯಸ್ಸನ್ನು 58 ರಿಂದ 60 ವರ್ಷಕ್ಕೆ ಏರಿಸಬೇಕೆಂಬ ಸರಕಾರದ ಆದೇಶವನ್ನು ಧಾರವಾಡ ಹೈಕೋರ್ಟ್ ಪೀಠ ಎತ್ತಿ ಹಿಡಿದಿದೆ.
ಕರ್ನಾಟಕ ಕೈಗಾರಿಕಾ ಉದ್ಯೋಗ ಸ್ಥಾಯಿ ಆದೇಶಗಳ ತಿದ್ದುಪಡಿ ನಿಯಮಗಳ ಮಾದರಿ ಅನ್ವಯ ನೌಕರರ ನಿವೃತ್ತಿ ವಯಸ್ಸನ್ನು ಏರಿಸಿ ಸರಕಾರ ಆದೇಶ ಹೊರಡಿಸಿತ್ತು. ಈ ಆದೇಶ ಪ್ರಶ್ನಿಸಿ ಹರಿಹರದ ಖಾಸಗಿ ಕಂಪೆನಿಯೊಂದು ಹೈಕೋರ್ಟ್ ಮೆಟ್ಟಿಲೇರಿತ್ತು.
ಕಂಪೆನಿ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಕಳೆದ ವರ್ಷ ವಜಾ ಮಾಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ಕಂಪೆನಿಯು ಹೈಕೋರ್ಟ್ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ.