ಗರ್ಭನಿರೋಧಕ ಬಳಕೆಯಲ್ಲಿ ಮುಸ್ಲಿಮರೇ ಅಧಿಕ: ಅಸದುದ್ದೀನ್ ಉವೈಸಿ

Update: 2022-07-13 03:00 GMT

ಹೈದರಾಬಾದ್: ಜನಸಂಖ್ಯೆ ಅಸಮತೋಲನ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆ ನೀಡಿದ ಬೆನ್ನಲ್ಲೇ, ಗರ್ಭನಿರೋಧಕ ಬಳಕೆ ಮಾಡುವವರಲ್ಲಿ ಮುಸ್ಲಿಮರೇ ಅಧಿಕ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಪ್ರತಿಪಾದಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

"ಮುಸ್ಲಿಮರು ಭಾರತದಲ್ಲಿ ಹುಟ್ಟಿದವರಲ್ಲವೇ? ನಾವು ವಾಸ್ತವವಾಗಿ ನೋಡಿದರೆ, ಇಲ್ಲಿನ ಮೂಲನಿವಾಸಿಗಳು ಕೇವಲ ಬುಡಕಟ್ಟು ಜನರು ಮತ್ತು ದ್ರಾವಿಡರು ಮಾತ್ರ. ಉತ್ತರ ಪ್ರದೇಶದಲ್ಲಿ ಯಾವುದೇ ಕಾನೂನು ಇಲ್ಲದೇ ಅಪೇಕ್ಷಿತ ಫಲವತ್ತತೆ ದರವನ್ನು 2026-2030ರ ವೇಳೆಗೆ ಸಾಧಿಸಬಹುದು" ಎಂದು ಎಎನ್‍ಐ ಜತೆಗೆ ಮಾತನಾಡಿದ ಅಸದುದ್ದೀನ್ ಉವೈಸಿ ಹೇಳಿದರು.

"ಅವರದ್ದೇ ಪಕ್ಷದ ಆರೋಗ್ಯ ಸಚಿವರು, ದೇಶದಲ್ಲಿ ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಗರ್ಭನಿರೋಧಕಗಳನ್ನು ಬಳಸುವಲ್ಲಿ ಮುಸ್ಲಿಮರೇ ಅಧಿಕ. 2016ರಲ್ಲಿ 2.6ರಷ್ಟಿದ್ದ ಫಲವತ್ತತೆ ದರ ಇದೀಗ 2.3 ಆಗಿದೆ. ದೇಶದ ಜನಸಂಖ್ಯಾ ವಿಭಜನೆಯು ಇತರ ಎಲ್ಲ ದೇಶಗಳಿಗಿಂತ ಉತ್ತಮವಾಗಿದೆ" ಎಂದು ಅಭಿಪ್ರಾಯಪಟ್ಟರು.

2023ರಲ್ಲಿ ಭಾರತದ ಜನಸಂಖ್ಯೆ ಚೀನಾದ ಜನಸಂಖ್ಯೆಯನ್ನು ಮೀರಲಿದೆ ಎಂದು ವಿಶ್ವಸಂಸ್ಥೆಯ ವರದಿ ಅಂದಾಜಿಸಿದ ಬಳಿಕ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಜನಸಂಖ್ಯೆ ನಿಯಂತ್ರಣ ಯೋಜನೆ ಯಶಸ್ವಿಯಾಗಿ ಮುಂದುವರಿಯಬೇಕು. ಆದರೆ ಜನಸಂಖ್ಯೆಯ ಅಸಮತೋಲನ ಉಂಟಾಗಲು ಅವಕಾಶ ನೀಡಬಾರದು ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News