ಹಿಜಾಬ್ ಪ್ರಕರಣ: ಮುಂದಿನ ವಾರ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಗೆ

Update: 2022-07-13 15:21 GMT

ಹೊಸದಿಲ್ಲಿ,ಜು.13: ಮುಸ್ಲಿಮ್ ಮಹಿಳೆಯರು ಹಿಜಾಬ್ ಧರಿಸುವುದು ಇಸ್ಲಾಮ್ ಧರ್ಮಾಚರಣೆಯ ಅಗತ್ಯ ಭಾಗವಲ್ಲ ಎಂಬ ಮಾ.15ರ ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಕೊನೆಗೂ ಸರ್ವೋಚ್ಚ ನ್ಯಾಯಾಲಯವು ಮುಂದಿನ ವಾರ ಕೈಗೆತ್ತಿಕೊಳ್ಳಲಿದೆ.

ವಿಷಯವು ಮುಂದಿನ ವಾರ ಸೂಕ್ತ ಪೀಠದ ಮುಂದೆ ಬರಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು ಹಿರಿಯ ವಕೀಲ ಪ್ರಶಾಂತ ಭೂಷಣ್ ಅವರಿಗೆ ತಿಳಿಸಿದರು. ವಿಚಾರಣೆಗೆ ದಿನಾಂಕವನ್ನು ನಿಗದಿಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸಿದ್ದ ಭೂಷಣ್,ಮಾರ್ಚ್ನಲ್ಲಿಯೇ ಅರ್ಜಿಗಳನ್ನು ಸಲ್ಲಿಸಲಾಗಿದ್ದರೂ ಈವರೆಗೆ ಪ್ರಾಥಮಿಕ ವಿಚಾರಣೆಗೂ ಬಂದಿಲ್ಲ ಎಂದು ತಿಳಿಸಿದ್ದರು.
  ‌
ಹಿಂದಿನ ಸಲ ಎ.26ರಂದು ನ್ಯಾ.ರಮಣ ಮುಂದೆ ಪ್ರಕರಣಗಳನ್ನು ಪ್ರಸ್ತಾಪಿಸಲಾಗಿತ್ತು ಮತ್ತು ವಿಚಾರಣೆಗೆ ದಿನಾಂಕವನ್ನು ನಿಗದಿಗೊಳಿಸುವ ಬಗ್ಗೆ ತಾನು ಪರಿಶೀಲಿಸುವುದಾಗಿ ಅವರು ಆಗ ತಿಳಿಸಿದ್ದರು. ಆದರೆ ವಿಷಯವನ್ನು ಶೀಘ್ರ ಪಟ್ಟಿ ಮಾಡಲಾಗಿರಲಿಲ್ಲ. ಬಳಿಕ ಮೇ 23ರಿಂದ ಜು.10ರವರೆಗೆ ಬೇಸಿಗೆ ರಜೆಯ ಅವಧಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ರಜಾಕಾಲ ಪೀಠಗಳು ಹೆಚ್ಚಾಗಿ ತುರ್ತು ವಿಷಯಗಳನ್ನು ಮಾತ್ರ ವಿಚಾರಣೆಗೆತ್ತಿಕೊಂಡಿದ್ದವು.
ಮಾರ್ಚ್ನಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಅರ್ಜಿದಾರರ ಪರ ವಕೀಲರು ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ತಡೆಯಲು ತಮ್ಮ ಮೇಲ್ಮನವಿಗಳ ತುರ್ತು ವಿಚಾರಣೆಗೆ ಆಗ್ರಹಿಸಿದ್ದರಾದರೂ ದಿನಾಂಕವನ್ನು ನಿಗದಿಗೊಳಿಸಲು ಮುಖ್ಯ ನ್ಯಾಯಮೂರ್ತಿಗಳು ನಿರಾಕರಿಸಿದ್ದರು.
 
ಮಾ.16ರಂದು ಅರ್ಜಿದಾರರಾದ ನಿಬಾ ನಾಝ್ ಪರ ವಕೀಲ ಸಂಜಯ ಹೆಗ್ಡೆ ಮತ್ತು ಆಯಿಷತ್ ಶಿಫಾ ಪರ ವಕೀಲ ದೇವದತ್ತ ಕಾಮತ್ ಅವರು ತುರ್ತು ವಿಚಾರಣೆಗೆ ಮನವಿ ಮಾಡಿಕೊಂಡಿದ್ದರಾದರೂ ಮುಖ್ಯ ನ್ಯಾಯಮೂರ್ತಿಗಳು ಯಾವುದೇ ದಿನಾಂಕವನ್ನು ಸೂಚಿಸಿರಲಿಲ್ಲ. ಪುನಃ ಮಾ.24ರಂದು ವಿಚಾರಣೆಗೆ ದಿನಾಂಕವನ್ನು ನಿಗದಿಗೊಳಿಸಲು ನಿರಾಕರಿಸಿದ್ದ ನ್ಯಾ.ರಮಣ,ಹಿಜಾಬ್ ನಿಷೇಧಕ್ಕೆ ಸಂಬಂಧಿಸಿದ ಪ್ರಕರಣಗಳಿಗೆ ಶಾಲಾ ಪರೀಕ್ಷೆಗಳೊಂದಿಗೆ ಯಾವುದೇ ಸಂಬಂಧವಿಲ್ಲ ಮತ್ತು ವಿಷಯವನ್ನು ಸಂವೇದನಾಶೀಲವಾಗಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಂದು ಕರ್ನಾಟಕ ಸರಕಾರದ ಪರ ಮಧ್ಯಪ್ರವೇಶ ಮಾಡಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಅರ್ಜಿಗಳನ್ನು ತುರ್ತು ಪಟ್ಟಿ ಮಾಡುವುದನ್ನು ವಿರೋಧಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News