PSI ನೇಮಕಾತಿ ಹಗರಣ: ಅಮೃತ್‍ಪೌಲ್ ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ

Update: 2022-07-13 15:40 GMT

ಬೆಂಗಳೂರು, ಜು.13: ಪಿಎಸ್ಸೈ ನೇಮಕಾತಿ ಹಗರಣದಲ್ಲಿ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ನಗರದ 1ನೆ ಎಸಿಎಂಎಂ ಕೋರ್ಟ್‍ಗೆ ಸಿಐಡಿ ಅಧಿಕಾರಿಗಳು ಹಾಜರುಪಡಿಸಿ ಮತ್ತೆ ಮೂರು ದಿನಗಳವರೆಗೆ ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ.

ಡಿವೈಎಸ್ಪಿ ಶಾಂತಕುಮಾರ್ ಹಾಗೂ ಪೊಲೀಸ್ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಮಧ್ಯೆ 1.36 ಕೋಟಿ ಹಣ ವರ್ಗಾವಣೆ ಆಗಿದೆ. ಮೊಬೈಲ್ ದತ್ತಾಂಶ ಅಳಿಸಿ ಹಾಕಲಾಗಿದೆ. ಹೀಗಾಗಿ, ಇನ್ನೂ 5 ದಿನ ವಶಕ್ಕೆ ನೀಡಬೇಕೆಂದು ಸಿಐಡಿ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು. 

ನ್ಯಾಯಪೀಠವು ಮೂರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿತು. ಜತೆಗೆ ಪ್ರತಿದಿನ 30 ನಿಮಿಷ ಕುಟುಂಬದವರ ಭೇಟಿ ಹಾಗೂ ವೈದ್ಯಕೀಯ ತಪಾಸಣೆಗೂ ಅನುಮತಿ ನೀಡಿತು. ಡಿವೈಎಸ್ಪಿ ಶಾಂತಕುಮಾರ್ ಸೇರಿ ನಾಲ್ವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ಅಮೃತ್ ಪೌಲ್ ಅವರು ವಿಚಾರಣೆ ವೇಳೆ ನಾನೇನು ತಪ್ಪು ಮಾಡಿಲ್ಲ. ನಡೆದಿರುವ ಅವ್ಯವಹಾರ ನನ್ನ ಗಮನಕ್ಕೆ ಬಂದಿಲ್ಲ ಎಂದು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು. ಜೊತೆಗೆ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಡಿವೈಎಸ್ಪಿ ಶಾಂತಕುಮಾರ್, ಸಿಬ್ಬಂದಿ ಶ್ರೀಧರ್, ಹರ್ಷ, ಶ್ರೀನಿವಾಸ್ ಅವರನ್ನು ಬಾಡಿ ವಾರೆಂಟ್ ಮೇರೆಗೆ ಪಡೆದುಕೊಂಡು ಪರಸ್ಪರ ವಿಚಾರಣೆಗೊಳಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News