ವಿಜಯಪುರ: ಪೊಲೀಸ್ ದೌರ್ಜನ್ಯ ಆರೋಪ ಹೊರಿಸಿದ್ದ ಯುವಕ ಅನುಮಾನಾಸ್ಪದವಾಗಿ ಸಾವು

Update: 2022-07-13 18:15 GMT
ಸೋಮನಾಥ ನಾಗಮೂರ್ತಿ - ಮೃತ ಯುವಕ 

ವಿಜಯಪುರ, ಜು.13: ವಿಜಯಪುರ ನಗರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಸೈ ಹಾಗೂ ಅವರ ಸಹೋದರನ ದೌರ್ಜನ್ಯಕ್ಕೆ ಒಳಗಾದ ಆರೋಪದ ವೀಡಿಯೊ ಹರಿಬಿಟ್ಟು ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಅನುಮಾನಾಸ್ಪಾದವಾಗಿ ಸಾವೀಗೀಡಾಗಿದ್ದು, ಕೊಲ್ಹಾರದ ಕೃಷ್ಣಾ ನದಿ ಪಾತ್ರದಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

ಸಾವಿಗೂ ಮುನ್ನ ಮೃತ ಯುವಕ ವೀಡಿಯೊ ಮಾಡಿ, ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾನೆ. ಇದಲ್ಲದೆ, ಡೆತ್ ನೋಟ್ ಸಹ ಬರೆದಿಟ್ಟಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಸೋಮನಾಥ ನಾಗಮೂರ್ತಿ (25) ಎಂದು ಗುರುತಿಸಲಾಗಿದೆ.

ವಿಜಯಪುರದ ಎಪಿಎಂಸಿ ಪೊಲೀಸ್ ಠಾಣೆಯ ಪಿಎಸ್ಸೈ ಸೋಮೇಶ ಗೆಜ್ಜಿ ಹಾಗೂ ಅವರ ಸಹೋದರ ಸಚಿನ್ ಗೆಜ್ಜಿ, ರವಿ ದೇಗಿನಾಳ ಹಾಗೂ ಸಂತೋಷ ದೇಗಿನಾಳ ಹೆಸರಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಸೋಮನಾಥ ನಾಗಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಕಳೆದ 5 ದಿನದಿಂದ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಪತ್ತೆಯಾಗಿದೆ. ಜುಲೈ 8ರಂದು ಫೇಸ್‌ಬುಕ್‌ನಲ್ಲಿ ಪೊಲೀಸ್ ದೌರ್ಜನ್ಯದ ಬಗ್ಗೆ ಸೋಮನಾಥ ವೀಡಿಯೊ ಮಾಡಿದ್ದ. ಇದಾದ ಬಳಿಕ ಆತ ನಾಪತ್ತೆಯಾಗಿದ್ದ. ಬುಧವಾರ ಆತನ ಮೃತ ದೇಹ ವಿಜಯಪುರ ಜಿಲ್ಲೆ ಕೊಲ್ಹಾರ ಪಟ್ಟಣದ ಕೃಷ್ಣಾ ನದಿ ಪಾತ್ರದಲ್ಲಿ ಪತ್ತೆಯಾಗಿದೆ.

ಸೋಮನಾಥ್‌ನ ಸಾವಿನ ಹಿನ್ನಲೆ ಪಿಎಸ್ಸೈ ಸೋಮೇಶ ಗೆಜ್ಜಿಯನ್ನು ವಜಾ ಮಾಡಬೇಕು ಹಾಗೂ ಉಳಿದ ಆರೋಪಿ ಗಳ ವಿರುದ್ಧ ಕಠಿಣ ಕ್ರಮ ತಗೆದುಕೊಳ್ಳಬೇಕು ಎಂದು ಮೃತನ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಘಟನೆ ಹಿನ್ನೆಲೆ ಏನು?

ವಿಜಯಪುರ ನಗರದಲ್ಲಿರುವ ಶಿವಗಿರಿ ಚೆಸ್ ಆ್ಯಂಡ್ ವೀಲ್ಸ್ ಗ್ಯಾರೇಜ್‌ನಲ್ಲಿ ಮೃತ ಸೋಮನಾಥ ಕೆಲಸ ಮಾಡುತ್ತಿದ್ದ. ಆದರ್ಶ ನಗರ ಪಿಎಸ್‌ಐ ಅವರ ಸಹೋದರ ತನ್ನ ಕಾರನ್ನು ಸರ್ವಿಸ್‌ಗೆ ಬಿಟ್ಟಿದ್ದರು. ಈ ವೇಳೆ ಕಾರಿನಲ್ಲಿದ್ದ ಒಂದು ಲಕ್ಷ ರೂ. ಕಾಣೆಯಾಗಿತ್ತು. ಹೀಗಾಗಿ ಪೊಲೀಸರು, ಸೋಮನಾಥನನ್ನು ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನಲಾಗಿದೆ. ಈ ಘಟನೆ ಕುರಿತು ಮೃತ ಯುವಕ ಸೋಮನಾಥ ಸುದೀರ್ಘ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News