ಭಾರೀ ಮಳೆ: ಬೆಳಗಾವಿಯ ಎರಡು ತಾಲೂಕುಗಳಲ್ಲಿ 2 ದಿನ ಶಾಲೆಗಳಿಗೆ ರಜೆ
Update: 2022-07-15 09:35 IST
ಬೆಳಗಾವಿ, ಜು.15: ಭಾರೀ ಮಳೆಯ ಕಾರಣ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ, ತಾಲೂಕು ಹಾಗೂ ಖಾನಾಪುರ ತಾಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜು.15 ಮತ್ತು 16ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.
ಜಿಲ್ಲಾದ್ಯಂತ ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ನದಿ, ಹಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ಮಕ್ಕಳ ಸಂಚಾರ ಅಪಾಯಕಾರಿ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಎರಡು ದಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಪರಿಸ್ಥಿತಿ ನೋಡಿಕೊಂಡು ಮುಂದುವರಿಯಲಾಗುವುದು. ಈ ಎರಡು ತಾಲೂಕು ಹೊರತುಪಡಿಸಿ ಉಳಿದೆಲ್ಲ ಕಡೆ ಶಾಲೆಗಳು ಎಂದಿನಂತೆ ಕಾರ್ಯಾಚರಿಸಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.