ಶೃಂಗೇರಿ | ಧಾರಾಕಾರ ಮಳೆಗೆ ಕೊಚ್ಚಿ ಹೋದ ರಾಜ್ಯ ಹೆದ್ದಾರಿ ರಸ್ತೆ: ಶೃಂಗೇರಿ-ಆಗುಂಬೆ ಮಧ್ಯೆ ಸಂಪರ್ಕ ಕಡಿತ
ಚಿಕ್ಕಮಗಳೂರು, ಜು.15: ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಳೆಯ ಅಬ್ಬರಕ್ಕೆ ರಾಜ್ಯ ಹೆದ್ದಾರಿ ರಸ್ತೆ ಕೊಚ್ಚಿ ಹೋದ ಘಟನೆ ಶೃಂಗೇರಿ ತಾಲೂಕಿನ ನೇರಳೆಕೊಡಿಗೆ ಎಂಬಲ್ಲಿ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನ ಶಾಲೆಗಳಿಗೆ ಶುಕ್ರವಾರ(ಜು.15) ರಜೆ ಘೋಷಣೆ ಮಾಡಲಾಗಿದೆ.
ನೇರಳೆಕೊಡಿಗೆ ಬಳಿ ರಾಜ್ಯ ಹೆದ್ದಾರಿಯ 100 ಅಡಿಯಷ್ಟು ರಸ್ತೆ ಕೊಚ್ಚಿ ಹೋಗಿದೆ. ಇದರಿಂದ ಶೃಂಗೇರಿ-ಆಗುಂಬೆ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಬಿಇಓ ಶುಕ್ರವಾರ ರಜೆ ಘೋಷಣೆ ಮಾಡಿದ್ದಾರೆ.
ಮೂಡಿಗೆರೆ, ಕಳಸ, ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕು ಬಿಳ್ಳೂರು ಬಳಿ ಮರಗಳು ಧರೆಗುರುಳಿವೆ. ದೇವರಮನೆ, ಬೈದುವಳ್ಳಿ ಗ್ರಾಮಗಳಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕಳಸ ತಾಲೂಕಿನ ಹೊರನಾಡು-ಬಲಿಗೆ ಸಂಪರ್ಕಿಸುವ ರಸ್ತೆ ಪಕ್ಕದಲ್ಲಿ ಭೂಕುಸಿತ ಉಂಟಾಗಿದೆ.
ಕಳಸ ತಾಲೂಕಿನ ಕಾರ್ಗದ್ದೆ ನಿವಾಸಿ ಜಾನಮ್ಮ ಎಂಬವರ ಮನೆಯ ಛಾವಣಿ ಗುರುವಾರ ರಾತ್ರಿ ಸುರಿದ ಗಾಳಿಮಳೆಗೆ ಕುಸಿದು ಹಾನಿಯಾಗಿದೆ.