ಸೋಲಿನ ಭೀತಿಯಿಂದ ಬಿಜೆಪಿ ಚಿಂತನ-ಮಂಥನ: ಎಂ.ಬಿ.ಪಾಟೀಲ್ ಟೀಕೆ

Update: 2022-07-15 14:28 GMT

ಬೆಂಗಳೂರು, ಜು. 15: ‘ಮಳೆ ಮತ್ತು ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನತೆ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಬಿಜೆಪಿ ಚಿಂತನ-ಮಂಥÀನ ನಡೆಸುತ್ತಿದ್ದು, ಅವರಿಗೆ ಈಗಲೇ ಸೋಲಿನ ಭೀತಿ ಆರಂಭವಾಗಿದೆ' ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್ ಇಂದಿಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸೋಲಲಿದೆ ಎಂದು ಅವರಿಗೆ ಆಂತರಿಕ ವರದಿ ಬಂದಿದೆ. ಆದುದರಿಂದ ಚುನಾವಣೆಯನ್ನು ಗೆಲ್ಲುವ ಕುರಿತು ಸಭೆ ಮಾಡುತ್ತಿದ್ದಾರೆ. ಆದರೆ, ಇದರಿಂದ ಯಾವುದೇ ಪ್ರಯೋಜನ ಇಲ್ಲ' ಎಂದು ಟೀಕಿಸಿದರು.

‘ಪ್ರವಾಹ ಪೀಡಿತ ಸ್ಥಳಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಕಳೆದ ಬಾರಿ ಪ್ರವಾಹಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಯಾರೂ ಬೇಕಾದರೂ ಪರಿಶೀಲನೆ ನಡೆಸಲಿ. ಸಂತ್ರಸ್ತರಿಗೆ ಪರಿಹಾರ ವಿತರಣೆ ಕೇವಲ ಕಣ್ಣೋರಿಸುವ ತಂತ್ರ ಆಗಬಾರದು. ಸರಕಾರ ಕೂಡಲೇ ಸಂತ್ರಸ್ತರ ನೆರವಿಗೆ ಧಾವಿಸಬೇಕಿದೆ' ಎಂದು ಎಂ.ಬಿ.ಪಾಟೀಲ್ ಆಗ್ರಹಿಸಿದರು.

ಡಿಕೆಶಿ ಹುಟ್ಟುಹಬ್ಬವನ್ನು ಆಚರಿಸುತ್ತೇವೆ: ‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‍ಗೆ 75 ವರ್ಷವಾದರೆ ಅವರ ಹುಟ್ಟುಹಬ್ಬವನ್ನು ಮಾಡಲಿ. ಈಗ ಅವರಿಗೆ ಅರವತ್ತು ವರ್ಷ ತುಂಬಿದೆ, ಷಷ್ಟಿಪೂರ್ತಿ ಮಾಡಿಕೊಳ್ಳಲಿ. ಇದೀಗ ಸಿದ್ದರಾಮಯ್ಯರ 75ನೆ ಹುಟ್ಟುಹಬ್ಬವನ್ನು ಎಲ್ಲರೂ ಒಗ್ಗಟ್ಟಿನಿಂದ ಆಚರಿಸುತ್ತಿದ್ದೇವೆ' ಎಂದು ಪಾಟೀಲ್ ಸ್ಪಷ್ಟಣೆ ನೀಡಿದರು.

‘ಎಐಸಿಸಿ ಮುಖಂಡ ರಾಹುಲ್ ಗಾಂಧಿ ಅವರೂ ಭಾಗವಹಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪೂರ್ವಭಾವಿ ಸಭೆಗೆ ಭಾಗಿಯಾಗಬೇಕಾದ ಅಗತ್ಯ ಇರಲಿಲ್ಲ. ಈಗಾಗಲೇ ಅವರು ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುತ್ತಿದ್ದಾರೆ. ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಕಾಂಗ್ರೆಸ್ ಇದರಲ್ಲಿ ಪಾಲ್ಗೊಳ್ಳಲಿದೆ. ಆದರೆ, ಇದು ಪಕ್ಷದ ಕಾರ್ಯಕ್ರಮವಲ್ಲ' ಎಂದು ವಿವರಿಸಿದರು.

ಇನ್ನೊಂದು ಚಕ್ರತೀರ್ಥ ಕಥೆಯಾಗದಿರಲಿ: ‘ಶಾಲಾ ಮಕ್ಕಳಿಗೆ ಮೊಟ್ಟೆ ನೀಡಬಾರದೆಂಬುದು ಸರಿಯಲ್ಲ. ಸರಕಾರ ಈ ಕುರಿತು ಪೌಷ್ಟಿಕಾಂಶಕ್ಕೆ ಸಂಬಂಧಿಸಿದ ತಜ್ಞರ ಅಭಿಪ್ರಾಯ ಪಡೆದುಕೊಳ್ಳಬೇಕು. ನಾವು ಚಿಕ್ಕವರಿದ್ದಾಗಿನಿಂದ ಹಾಲು ಕುಡಿದು ಬೆಳೆದಿದ್ದೇವೆ. ಈಗ ಹಾಲು ಮೊಟ್ಟೆ ಕೊಡಬಾರದೆನ್ನುವುದು ಅವೈಜ್ಞಾನಿಕ. ಕೆಲವರ ‘ಅಜೆಂಡಾ' ಜಾರಿಗೆ ತರಲು ಸರಕಾರ ಹೊರಟಿದೆ. ಆಹಾರ ಪದ್ಧತಿ ವಿಚಾರ ಸಂಬಂಧ ತಜ್ಞರಿಂದ ಸಲಹೆ ಪಡೆಯಬೇಕು. ಸರಕಾರ ಮನಸ್ಸಿಗೆ ಬಂದಂತೆ ಜಾರಿ ಸಲ್ಲ. ಇದು ಇನ್ನೊಂದು ಚಕ್ರತೀರ್ಥ ಕಥೆಯಾಗುತ್ತದೆ'

-ಎಂ.ಬಿ.ಪಾಟೀಲ್ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News