×
Ad

ದಲಿತ ಯುವಕನಿಗೆ ಗೋಣಿಬೀಡು ಪಿಎಸ್ಸೈ ಮೂತ್ರ ಕುಡಿಸಿದ ಪ್ರಕರಣ: ಹೈಕೋರ್ಟ್ ನಲ್ಲಿ ರಾಜಿ

Update: 2022-07-15 20:12 IST
ಪಿಎಸ್ಸೈ ಅರ್ಜುನ್

ಚಿಕ್ಕಮಗಳೂರು, ಜು.15: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದರ ವಿಚಾರಣೆ ವೇಳೆ ದಲಿತ ಯುವಕನಿಗೆ ಠಾಣೆಯ ಪಿಎಸ್‍ಐ ಮೂತ್ರ ಕುಡಿಸಿ ಹಿಂಸೆ ನೀಡಿದ್ದರು ಎಂದು ಆರೋಪಿಸಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಪ್ರಕರಣವನ್ನು ರಾಜ್ಯ ಉಚ್ಚನ್ಯಾಯಾಲಯ ವಜಾಗೊಳಿಸಿ ಶುಕ್ರವಾರ ಆದೇಶಿಸಿದೆ.

ಕಳೆದ 2ವರ್ಷಗಳ ಹಿಂದೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಸೈ ಅರ್ಜುನ್ ಎಂಬವರು ಪ್ರಕರಣವೊಂದರ ವಿಚಾರಣೆಗೆಂದು ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಎಂಬಾತನನ್ನು ಠಾಣೆಗೆ ಕರೆತಂದು ಹಲ್ಲೆ ಮಾಡಿದ್ದಲ್ಲದೇ ತಲೆಕೆಳಗೆ ನೇತು ಹಾಕಿ ಮೂತ್ರ ಕುಡಿಸಿ ಚಿತ್ರಹಿಂಸೆ ನೀಡಿದ್ದರು ಎಂದು ಕಿರುಗುಂದ ಗ್ರಾಮದ ದಲಿತ ಯುವಕ ಪುನೀತ್ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದ.

ಈ ಪ್ರಕರಣ ಇಡೀ ರಾಜ್ಯದಲ್ಲಿ ಭಾರೀ ಸದ್ದು ಮಾಡಿದ್ದು, ಪಿಎಸ್ಸೈ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆಗಳು ನಡೆದಿದ್ದವು. ಇದರ ಬೆನ್ನಲ್ಲೇ ಅಂದು ಕರ್ತವ್ಯದಲ್ಲಿದ್ದ ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಸೈ ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು. ಪ್ರಕರಣ ಸಂಬಂಧ ಐಜಿಪಿ ಅವರು ಪಿಎಸ್ಸೈ ಅರ್ಜುನ್ ಅವರನ್ನು ಅಮಾನತು ಮಾಡಿದ್ದರು. ಪಿಎಸ್ಸೈ ಅರ್ಜುನ್ ಅವರು ಜಿಲ್ಲಾ ನ್ಯಾಯಾಲಯದಲ್ಲಿ 2 ಬಾರಿ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. 

ಇದನ್ನೂ ಓದಿ... ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ: ಗೋಣಿಬೀಡು ಪಿಎಸ್ಸೈ ಅರ್ಜುನ್ ಅಮಾನತು

ಆರೋಪಿಗೆ ಪಿಎಸ್‍ಐ ಮೂತ್ರ ಕುಡಿಸಿದ್ದಾರೆನ್ನಲಾದ ಈ ಪ್ರಕರಣ ರಾಜ್ಯ ಉಚ್ಚನ್ಯಾಯಲಯದ ಮೆಟ್ಟಿಲೇರಿದ್ದು, ಶುಕ್ರವಾರ ನಡೆದ ವಿಚಾರಣೆ ವೇಳೆ ಪಿಎಸ್ಸೈ ಅರ್ಜುನ್ ಹಾಗೂ ದೂರುದಾರ ಕಿರಗುಂದ ಗ್ರಾಮದ ದಲಿತ ಯುವಕ ಪುನೀತ್ ರಾಜಿ ಮಾಡಿಕೊಂಡ ಹಿನ್ನಲೆಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯ ಈ ಪ್ರಕರಣವನ್ನು ವಜಾಗೊಳಿಸಿ ಆದೇಶಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News