ಎಸಿಬಿ ರದ್ದುಪಡಿಸುವಂತೆ ಕೋರಿ ರಾಜ್ಯಪಾಲರಿಗೆ ಮಾಜಿ ಶಾಸಕರ ವೇದಿಕೆ ಮನವಿ

Update: 2022-07-15 15:53 GMT
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಜು.15: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಾಜ್ಯದಲ್ಲಿ ಭ್ರಷ್ಟಾಚಾರ ವಿಮುಕ್ತಿಗೊಳಿಸುವ ಬಗ್ಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿರುವುದರಿಂದ ತಕ್ಷಣವೇ ಎಸಿಬಿಯನ್ನು ರದ್ದುಪಡಿಸುವಂತೆ ರಾಜ್ಯ ಸರಕಾರಕ್ಕೆ ಸೂಕ್ತ ನಿದೇರ್ಶನ ನೀಡಬೇಕು ಎಂದು ರಾಜ್ಯಪಾಲರಿಗೆ ಮಾಜಿ ಶಾಸಕರ ವೇದಿಕೆ ಮನವಿ ಮಾಡಿದೆ.

ಈ ಸಂಬಂಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಪತ್ರ ಬರೆದಿರುವ ರಾಜ್ಯ ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಎಚ್.ಡಿ.ಬಸವರಾಜ, ರಾಜ್ಯ ಸರಕಾರದಲ್ಲಿರುವ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೆ ಸರಕಾರದ ಅಧಿಕಾರಿಗಳನ್ನು ನಿಯಂತ್ರಿಸಬೇಕೆನ್ನುವ ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯದಲ್ಲಿ ಪ್ರಾರಂಭಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಾಮಾಣಿಕವಾಗಿ ಭ್ರಷ್ಟಾಚಾರ ವ್ಯವಸ್ಥೆಯನ್ನು ಕಾನೂನು ರೂಪಿಸಿದ ಆಯಾಮದಲ್ಲಿ ಲೋಕಾಯುಕ್ತ ಸಂಸ್ಥೆಯು ರಾಜ್ಯದಲ್ಲಿ ಉತ್ತಮ ಕೆಲಸ ನಿರ್ವಹಿಸುವುದರ ಜೊತೆಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದು, ಇತರೆ ರಾಜ್ಯಗಳಿಗೆ ಕರ್ನಾಟಕವು ಭ್ರಷ್ಟಾಚಾರ ವ್ಯವಸ್ಥೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು ಎಂದು ಅವರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವ್ಯವಸ್ಥೆಯನ್ನು ನಿಯಂತ್ರಿಸಬೇಕಾಗಿದ್ದ ಭ್ರಷ್ಟಾಚಾರ ನಿಗ್ರಹ ದಳ ಸಂಪೂರ್ಣವಾಗಿ ವಿಫಲವಾಗಿರುವುದರಿಂದ, ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ಸರಕಾರದ ಉತ್ತಮ ಕೆಲಸಗಳಿಗೆ ಕಳಂಕ ತರುತ್ತಿರುವ ಭ್ರಷ್ಟಾಚಾರ ನಿಗ್ರಹ ದಳವನ್ನು ಕೂಡಲೆ ರದ್ದುಪಡಿಸುವಂತೆ ಮುಖ್ಯಮಂತ್ರಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News