×
Ad

ನ್ಯಾ.ಸಂದೇಶ್‍ಗೆ ಪೊಲೀಸ್ ಭದ್ರತೆ, ತನಿಖೆಗೆ ಎಸ್‍ಐಟಿ ರಚಿಸಲು ಕೋರಿ ಹೈಕೋರ್ಟ್ ಗೆ ಅರ್ಜಿ

Update: 2022-07-15 22:04 IST

ಬೆಂಗಳೂರು, ಜು.15: ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಹಾಗೂ ಅದರ ಎಡಿಜಿಪಿ ಸೀಮಂತ್‍ಕುಮಾರ್ ಸಿಂಗ್ ಅವರ ವಿರುದ್ಧ ಗಂಭೀರ ಟೀಕೆ ಮಾಡಿರುವುದಕ್ಕೆ ನ್ಯಾ.ಎಚ್.ಪಿ.ಸಂದೇಶ್ ಅವರಿಗೆ ವರ್ಗಾವಣೆ ಬೆದರಿಕೆ ಹಾಕಿರುವ ಬಗ್ಗೆ ತನಿಖೆ ನಡೆಸಲು ಎಸ್‍ಐಟಿ ರಚಿಸಬೇಕು ಹಾಗೂ ಸೂಕ್ತ ಪೊಲೀಸ್ ಭದ್ರತೆ ನೀಡುವಂತೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಕೆಯಾಗಿದೆ. ಅರ್ಜಿ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ತುಮಕೂರು ಮೂಲದ ವಕೀಲ ಎಲ್.ರಮೇಶ್ ನಾಯಕ್ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರನ್ನು ಪ್ರತಿವಾದಿಯನ್ನಾಗಿಸಲಾಗಿದೆ. 

ಎಸಿಬಿ ಬಗ್ಗೆ ಟೀಕೆ ಮಾಡಿರುವ ನ್ಯಾ.ಸಂದೇಶ್ ಅವರಿಗೆ ಝಡ್ ಝಡ್ ಪ್ಲಸ್ ಅಥವಾ ವೈ ಪ್ಲಸ್ ಭದ್ರತೆಯನ್ನು ಒದಗಿಸುವಂತೆ ಸರಕಾರಕ್ಕೆ ಆದೇಶ ನೀಡಬೇಕು. ಜತೆಗೆ ಅವರು ಎಸಿಬಿ ಮತ್ತು ಸೀಮಂತ್‍ಕುಮಾರ್‍ಸಿಂಗ್ ವಿರುದ್ಧ ಟೀಕೆ ಮಾಡುವ ಮೂಲಕ ಅಲ್ಲಿನ ಭ್ರಷ್ಟಾಚಾರವನ್ನು ಸಮಾಜಕ್ಕೆ ಎತ್ತಿ ತೋರಿಸಿದ್ದಾರೆ. ಆದರೆ, ಅವರಿಗೆ ವರ್ಗಾವಣೆ ಮಾಡಿಸುವ ಬೆದರಿಕೆ ಹಾಕಿರುವುದರಿಂದ ನ್ಯಾಯಪೀಠಕ್ಕೆ ಬೆದರಿಕೆ ಹಾಕಿದಂತೆ, ಹೀಗಾಗಿ, ನ್ಯಾ.ಸಂದೇಶ್ ಅವರಿಗೆ ಬೆದರಿಕೆ ಹಾಕಿರುವ ಬಗ್ಗೆ ಸಮಗ್ರ ತನಿಖೆ ನಡೆಸಲು ವಿಶೇಷ ತನಿಖಾ ತಂಡ ರಚಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News