×
Ad

'ಭ್ರಷ್ಟರಿಗೆ ರಕ್ಷಣೆ ನೀಡಲು ಈ ನಿಷೇಧವೇ?': ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೋ ನಿಷೇಧಕ್ಕೆ ವ್ಯಾಪಕ ಆಕ್ರೋಶ

Update: 2022-07-15 22:53 IST
(ಸಿದ್ದರಾಮಯ್ಯ | ದಿನೇಶ್ ಗುಂಡೂರಾವ್ | ಕವಿರಾಜ್)

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಫೋಟೋ ಹಾಗೂ ವಿಡಿಯೋ ದೃಶ್ಯ ಮಾಡುವುದನ್ನು ಸರ್ಕಾರ ನಿಷೇಧಿಸಿದ್ದು, ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ  ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು ಸರಕಾರದ ಕ್ರಮವನ್ನು ಪ್ರಶ್ನೆ ಮಾಡಿದ್ದಾರೆ. 

ಈ ಸಂಬಂಧ ಪ್ರತಿಕ್ರಿಯಿಸಿರುವ ಸಿದ್ದರಾಯ್ಯ, 'ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಕಚೇರಿ ವೇಳೆಯಲ್ಲಿ ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಫೋಟೋ, ವೀಡಿಯೊ ಮಾಡದಂತೆ ನಿಷೇಧಿಸಿ ಆದೇಶ ಹೊರಡಿಸಿರುವುದು ಸರಕಾರದ ಹೊಣೆಗೇಡಿ ಕ್ರಮವಾಗಿದೆ' ಎಂದು ಹೇಳಿದ್ದಾರೆ. 

'ಭ್ರಷ್ಟ ಅಧಿಕಾರಿಗಳಿಗೆ ರಕ್ಷಣೆ ನೀಡಲು ಈ ನಿಷೇಧವೆ? ಸರ್ಕಾರಿ ಕಚೇರಿಗಳು ಭ್ರಷ್ಟರ ತಾಣವಾಗಿವೆ. ಸಾರ್ವಜನಿಕರು ಇತ್ತೀಚೆಗೆ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ಮೊಬೈಲ್ ಮೂಲಕ ಬಯಲಿಗೆಳೆದಿದ್ದಾರೆ. ಇದು ಅಪಥ್ಯವೇ? ಈ ಸರ್ಕಾರ ಕೆಲ ಭ್ರಷ್ಟ ಅಧಿಕಾರಿಗಳೊಂದಿಗೆ ಶಾಮೀಲಾಗಿ 40% ಕಮೀಷನ್ ಹೊಡೆಯುತ್ತಿದೆ. ಸರ್ಕಾರದ ಅನೇಕ ಇಲಾಖೆಗಳು ಸಾರ್ವಜನಿಕರನ್ನು ಸುಲಿಗೆ ಮಾಡುವ ವಸೂಲಿ ಕೇಂದ್ರಗಳಾಗಿವೆ. ಸರ್ಕಾರ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು. ಅದು ಬಿಟ್ಟು ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ. ಇದು ಭ್ರಷ್ಪಪರ ಸರ್ಕಾರ' ಎಂದು ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್ ಕಿಡಿಗಾರಿದ್ದಾರೆ.

'ಸರ್ಕಾರಿ ಕಚೇರಿಗಳಲ್ಲಿ ನಡೆಯುವ ಅಕ್ರಮಗಳನ್ನು ಬಯಲಿಗೆಳೆದು ಜನರೇ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುತ್ತಿದ್ದಾರೆ. ಇದು ಪಾರದರ್ಶಕ ಸರ್ಕಾರವಾಗಿದ್ದರೆ ಹೀಗೆ ಅಕ್ರಮ ಬಯಲಿಗೆಳೆಯುವ ಜನರ ಬೆನ್ನಿಗೆ ನಿಲ್ಲಬೇಕು. ಆದರೆ ಬೊಮ್ಮಾಯಿ ಸರ್ಕಾರ ನಿಂತಿರುವುದು ಯಾರ ಬೆನ್ನಿಗೆ? ಭ್ರಷ್ಟರ ರಕ್ಷಣೆಗೆ‌ ನಿಂತಿರುವ ಈ ಸರ್ಕಾರದಿಂದ ಏನು ನಿರೀಕ್ಷಿಸಲು ಸಾಧ್ಯ?' ಎಂದೂ ದಿನೇಶ್ ಗುಂಡೂರಾವ್ ಟ್ವೀಟಿಸಿದ್ದಾರೆ.  

--------------------------------------------------------------

ಈ ಮಟ್ಟಿನ ನಿರ್ಲಜ್ಜ ನಡೆಯಿಟ್ಟಿರುವುದು ಕ್ರೂರ ವ್ಯಂಗ್ಯ: ಕವಿರಾಜ್

ಸರ್ಕಾರಿ ಕಚೇರಿಗಳಲ್ಲಿ ವೀಡಿಯೋ ಚಿತ್ರೀಕರಣ ನಿಷೇದ ಮಾಡಿರುವುದು ಭ್ರಷ್ಟಾಚಾರಕ್ಕೆ ನೇರ ಬಹಿರಂಗ ಶ್ರೀರಕ್ಷೆ ನೀಡಿರುವುದಲ್ಲದೆ ಇನ್ನೇನು ಅಲ್ಲಾ. ಇತ್ತೀಚಿನ ದಿನಗಳಲ್ಲಿ ಭ್ರಷ್ಟರಿಗೆ ಕಿಂಚಿತ್ತಾದರೂ ಭಯವಿದ್ದರೆ ಅದು ಈ ಮೊಬೈಲ್ ವೀಡಿಯೋಗಳದ್ದು ಮಾತ್ರ. ಜನರ ಹಿತ ಕಾಯಬೇಕಾದ ಕಾನೂನಿನ ಮೂಲಕವೇ ಆ ಅಡ್ಡಿಯನ್ನು ನಿವಾರಿಸಿಕೊಳ್ಳಲು ಈ ಮಟ್ಟಿನ ನಿರ್ಲಜ್ಜ ನಡೆಯಿಟ್ಟಿರುವುದು ವ್ಯವಸ್ಥೆಯ ಅನೈತಿಕ ದುರ್ಬಳಕೆಯ ಪರಮಾವಧಿ ,ಕ್ರೂರ ವ್ಯಂಗ್ಯ. ಏನೇ ಮಾಡಿದರೂ ಜನರ ಬಳಿ ವೋಟು ಒತ್ತಿಸಿಕೊಳ್ಳುತ್ತೇವೆ ಎಂಬ ಧಾರ್ಷ್ಟ್ಯವಿದ್ದಾಗಲೇ ಒಂಚೂರು ಮುಜುಗರವಿಲ್ಲದೆ ಇಂತಹಾ ಕಾನೂನು ತರಲು ಸಾಧ್ಯ ಎಂದು ನಿರ್ದೇಶಕ, ಗೀತ ರಚನೆಕಾರ ಕವಿರಾಜ್ ಅವರು ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ. 

------------------------------------------------------

ಭ್ರಷ್ಟರಿಗೆ ಸರಕಾರದ ಉತ್ತೇಜನ: ಕೆಆರ್ ಎಸ್ 

ಸರಕಾರಿ ಕಚೇರಿಗಳಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ ನಿಷೇಧಿಸುವ ಮೂಲಕ ರಾಜ್ಯ ಸರಕಾರವು ಭ್ರಷ್ಟಾಚಾರಕ್ಕೆ ಉತ್ತೇಜನ ನೀಡುತ್ತಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(ಕೆಆರ್‍ಎಸ್) ಟೀಕಿಸಿದೆ.

'ರಾಜ್ಯ ಸರಕಾರದ ಎಲ್ಲ ಇಲಾಖೆಗಳ ಕಚೇರಿಗಳಲ್ಲಿ ಸಾರ್ವಜನಿಕರು ಅನುಮತಿ ಇಲ್ಲದೆ ಫೋಟೊ ತೆಗೆಯುವುದು ಮತ್ತು ವಿಡಿಯೊ ಚಿತ್ರೀಕರಿಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಇದು ರಾಜ್ಯದ ಜನರ ಹಿತಾಸಕ್ತಿ ಕಾಯುವ ಬದಲು, ಭ್ರಷ್ಟ ಅಧಿಕಾರಿಗಳ ಹಾಗೂ ನೌಕರರ ರಕ್ಷಣೆ ನಿಲ್ಲುವಂತೆ ಇದೆ ಎಂದು ಹೇಳಿದೆ'. 

 ಸಿ.ಎನ್.ದೀಪಕ್ - ಪ್ರಧಾನ ಕಾರ್ಯದರ್ಶಿ, ಕೆಆರ್ ಎಸ್ ಪಕ್ಷ

--------------------------------------------------------------



 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News