ಕಾರಾಗೃಹಗಳಲ್ಲಿ ವೈದ್ಯಾಧಿಕಾರಿಗಳ ಕೊರತೆ: ವಸ್ತುಸ್ಥಿತಿ ವರದಿ ಕೇಳಿದ ಹೈಕೋರ್ಟ್
Update: 2022-07-15 22:59 IST
ಬೆಂಗಳೂರು, ಜು.15: ರಾಜ್ಯದ ಕಾರಾಗೃಹಗಳಲ್ಲಿ ವೈದ್ಯರು, ದಾದಿಯರು ಹಾಗೂ ಮನೋರೋಗ ಚಿಕಿತ್ಸಕರ ನೇಮಕಾತಿಯ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.
ಕಾರಾಗೃಹಗಳಲ್ಲಿ ಕೈದಿಗಳಿಗೆ ಅಗತ್ಯ ಸೌಲಭ್ಯಗಳಿಲ್ಲದೆ ಜೀವಿಸುತ್ತಿದ್ದಾರೆ ಎಂದು ಆರೋಪಿಸಿ ಗೌರಿ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಬದಲಿಸಿಕೊಂಡಿದೆ. ಈ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾ.ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಕೀಲರ ವಾದ ಆಲಿಸಿದ ನ್ಯಾಯಪೀಠವು, ಕಾರಾಗೃಹಗಳಲ್ಲಿ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಮನೋರೋಗ ಚಿಕಿತ್ಸಕರ ನೇಮಕಾತಿಯ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿ ವಿಚಾರಣೆ ಮುಂದೂಡಿತು.