ಆಮ್ ಆದ್ಮಿ ಪಕ್ಷಕ್ಕೆ ರಾಜ್ಯದ 224 ಕ್ಷೇತ್ರಗಳನ್ನೂ ಗೆಲ್ಲುವ ಗುರಿ: ಪೃಥ್ವಿ ರೆಡ್ಡಿ

Update: 2022-07-15 17:53 GMT

ಚಿಕ್ಕಮಗಳೂರು, ಜು.15: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ರಾಜ್ಯದ ಎಲ್ಲಾ 224 ಕ್ಷೇತ್ರಗಳನ್ನೂ ಗೆಲ್ಲುವ ಗುರಿ ಹೊಂದಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ತಿಳಿಸಿದರು.

ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷವು ದಿಲ್ಲಿ ಮಾದರಿಯಲ್ಲಿ ಪ್ರತೀ ರಾಜ್ಯದಲ್ಲೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ. ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲೂ ಸಿಹಿ ಸುದ್ದಿಯನ್ನು ಜನತೆಗೆ ನೀಡಲಿದ್ದೇವೆ. ಸ್ಥಳೀಯ ಜನರಿಗೆ ಪ್ರಾಮಾಣಿಕ ಆಯ್ಕೆಯನ್ನು ನಾವು ನೀಡಲಿದ್ದೇವೆ. ನಾವು ಕೈಗೆ ಪೊರಕೆ ತೆಗೆದುಕೊಂಡಿದ್ದೇವೆ. ಪ್ರತೀ ಕ್ಷೇತ್ರದಲ್ಲಿ ಉತ್ತಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಸಂಪೂರ್ಣ ವ್ಯವಸ್ಥೆಯನ್ನು ಸ್ವಚ್ಛಗೊಳಿಸುತ್ತೇವೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.

ಮುಂಬರುವ ಚುನಾವಣೆಯನ್ನು ಜನರು ಚುನಾವಣೆ ರೀತಿ ನೋಡದೆ ಜನಾಂದೋಲನದ ರೀತಿ ನೋಡಲಿದ್ದಾರೆ. ಇಂದಿನ ರಾಜಕಾರಣವನ್ನು ನೋಡಿ ಬೇಸರಗೊಂಡು ಮನೆಯಲ್ಲಿ ಕುಳಿತಿರುವ ಜನರು ಆಮ್ ಆದ್ಮಿ ಪಕ್ಷ ಸೇರಲು ಮುಂದೆ ಬರುತ್ತಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಅಭ್ಯರ್ಥಿಗಳನ್ನು ಹಾಕಿ ಗೆಲ್ಲಿಸಲಿದ್ದೇವೆ ಎಂದ ಅವರು, ಕೆಲ ರಾಜ್ಯಗಳಲ್ಲಿ ನಾವು ಕಟ್ಟುವ ತೆರಿಗೆ ಹಣ ಲೂಟಿ ಆಗುತ್ತಿದೆ. ಅದೇ ತೆರಿಗೆ ಹಣವನ್ನು ಉಪಯೋಗಿಸಿ ಉಚಿತ ಶಿಕ್ಷಣ, ಅಂತಾರಾಷ್ಟ್ರೀಯ ಮಟ್ಟದ ಆರೋಗ್ಯ ಚಿಕಿತ್ಸೆ, ಉಚಿತ ವಿದ್ಯುತ್, ನೀರು ಎಲ್ಲವನ್ನೂ ಕೊಟ್ಟ ನಂತರವೂ ಸಿಎಜಿ ಪ್ರಕಾರ ಇಡೀ ದೇಶದಲ್ಲಿ ಲಾಭದಲ್ಲಿ ನಡೆಯುತ್ತಿರುವ ಏಕೈಕ ಸರಕಾರ ದಿಲ್ಲಿಯ ಆಮ್ ಆದ್ಮಿ ಸರಕಾರವಾಗಿದೆ. ಈ ಕೆಲಸದ ಬಲದ ಮೇಲೆ ಮತ್ತೊಂದು ರಾಜ್ಯವನ್ನೂ ಗೆದ್ದಿದ್ದೇವೆ ಎಂದರು.

ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ, ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯದ ಪ್ರಮುಖ ಮೂರೂ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಅನುಷ್ಠಾನಕ್ಕೆ ತರಲು ಬದ್ಧವಾಗಿಲ್ಲ. ಮೂರೂ ಪಕ್ಷಗಳಲ್ಲಿ ಕೋಮುವಾದ, ಭ್ರಷ್ಟಾಚಾರ ಹಾಗೂ ಕುಟುಂಬ ರಾಜಕಾರಣ ತಾಂಡವವಾಡುತ್ತಿದೆ. ಆಮ್‍ಆದ್ಮಿ ಪಕ್ಷ ದಿಲ್ಲಿಯಲ್ಲಿ ಮಾಡಿದ ಸಾಧನೆ ಇಲ್ಲೇಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಎಲ್ಲಾ ಇಲಾಖೆಗಳಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಕೇಂದ್ರದಲ್ಲಿ ಸರ್ವಾಧಿಕಾರಿ ಧೋರಣೆಯ ಸರಕಾರ ಇದೆ. ದೇಶವನ್ನು ಪಾಳೆಗಾರಿಕೆ ಆಳ್ವಿಕೆಗೆ ಕೊಂಡೊಯ್ಯುತ್ತಿದ್ದಾರೆ. ಮೂರೂ ಪಕ್ಷಗಳದ್ದೂ ಬೇರೆ ಪಕ್ಷವನ್ನು ಒಡೆದು ಆಳುವ ನೀತಿಯಾಗಿದೆ. ಬಹುಮತಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಜವಾದದ ಹಿನ್ನೆಲೆಯಲ್ಲಿ ಬಂದರೂ ಸಿದ್ದರಾಮೋತ್ಸವ ಮಾಡಿಕೊಳ್ಳಲು ಹೊರಟಿದ್ದಾರೆ. ಇಷ್ಟವಿಲ್ಲವಾದರೂ ಉತ್ಸವ ಏಕೆ? ಯಾರ ಒತ್ತಡಕ್ಕೆ ಮಣಿದು ಉತ್ಸವ ಮಾಡಿಕೊಳ್ಳುತ್ತಿದ್ದೀರಾ? ಇದು ಕೇವಲ ಅವರನ್ನು ತಪ್ಪಿಸಿ ತಾವು ಮುಖ್ಯಮಂತ್ರಿ ಆಗಬೇಕು ಎನ್ನವು ವೈಯಕ್ತಿಕ ಉದ್ದೇಶದ್ದಷ್ಟೇ ಆಗಿದೆ. ಇದಕ್ಕೆ ವೆಚ್ಚ ಮಾಡುವ ಹಣವನ್ನು ಸಣ್ಣ ಸಣ್ಣ ಸಮಾಜಕ್ಕೆ ಸೇರಿದ ದೇವಸ್ಥಾನಗಳನ್ನಾದರೂ ಅಭಿವೃದ್ಧಿ ಪಡಿಸಬಹುದಿತ್ತು ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ವಿಜಯ್ ಶರ್ಮ, ರಾಜ್ಯ ಸಹಕಾರ್ಯದರ್ಶಿ ದರ್ಶನ್ ಜೈನ್, ಜಿಲ್ಲಾ ಸಂಚಾಲಕ ಡಾ.ಸುಂದರೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಜಮೀಲ್ ಅಹಮ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News