ಒಡಕು ಕನ್ನಡಿ, ಮಸುಕು ಪ್ರತಿಬಿಂಬ: ಕಾಂಗ್ರೆಸ್ ವಿರುದ್ಧ ಬಿಜೆಪಿ ಲೇವಡಿ

Update: 2022-07-15 18:54 GMT

ಬೆಂಗಳೂರು, ಜು. 15: ‘ಒಡೆದ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಒಡೆದೇ ಇರುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರದು ಎಂದೂ ಒಂದಾಗದ ಒಡಕು ಮನಸು. ಬ್ರೇಕ್ ಫಾಸ್ಟ್ ಮೀಟಿಂಗ್‍ನಿಂದ ಇದೆಲ್ಲ ಸರಿ ಹೋಗುವ ಮಾತೇ? ಒಡಕು ಕನ್ನಡಿ, ಮಸುಕು ಪ್ರತಿಬಿಂಬ!' ಎಂದು ಬಿಜೆಪಿ ಟೀಕಿಸಿದೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ವ್ಯಕ್ತಿಪೂಜೆ ಬೇಡ, ಪಕ್ಷಪೂಜೆ ಮಾಡಿ ಎಂದ ಡಿಕೆಶಿ ಈಗ ತನ್ನದೇ ಮನೆಯಲ್ಲಿ ಮೂಲೆಗುಂಪಾಗುತ್ತಿದ್ದಾರೆ. ಪಕ್ಷದ ವೇದಿಕೆಯಲ್ಲೇ ನಡೆಯುವ ವ್ಯಕ್ತಿಪೂಜೆಗೆ ರಾಹುಲ್ ಗಾಂಧಿ ಮುಖ್ಯ ಅತಿಥಿಯಂತೆ, ಹೈಕಮಾಂಡ್ ಸಿದ್ದರಾಮಯ್ಯ ಪರವಾಗಿ ನಿಂತಿದೆಯೇ? ಡಿಕೆಶಿ ತಯಾರಿಸಿದ ಊಟವನ್ನು ಸಿದ್ದರಾಮಯ್ಯಗೆ ಬಡಿಸುವ ಹುನ್ನಾರವೇ ಇದು?' ಎಂದು ಪ್ರಶ್ನಿಸಿದೆ.

‘ಸಿದ್ದರಾಮೋತ್ಸವದಿಂದ ಎರಡರಲ್ಲಿ ಯಾವುದಾದರೂ ಒಂದು ನಿಶ್ಚಿತ! ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದಿದ್ದರೆ, ಸಿದ್ದರಾಮಯ್ಯ ಪಕ್ಷ ಬಿಡುತ್ತಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದರೆ ಡಿಕೆಶಿ ಪಕ್ಷ ಒಡೆಯುತ್ತಾರೆ. ನಕಲಿ ಗಾಂಧಿಗಳಿಗೀಗ ಇತ್ತ ದರಿ, ಅತ್ತ ಪುಲಿ ಗಾದೆಯ ಅನುಭವ!' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಹಿಂಬಾಲಕರು ಸಿಗಲಾರರು: ‘ಭಾರತ್ ಜೋಡೋ ಅಭಿಯಾನ'ದ ಅಂಗವಾಗಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡಲು ಉದ್ದೇಶಿಸಿರುವ ರಾಹುಲ್ ಗಾಂಧಿ ಅವರೇ, ಭಾರತ ಈಗ ಮತ್ತಷ್ಟು ಬಲಿಷ್ಠವಾಗಿದೆ. ಮುರಿದು ಹೋಗಿರುವುದು ಕಾಂಗ್ರೆಸ್ ಪಕ್ಷ, ಮೊದಲು ಕಾಂಗ್ರೆಸ್ ಜೋಡೋ ಅಭಿಯಾನ ಮಾಡಿ. ಮುಂದೊಂದು ದಿನ ಕಾಂಗ್ರೆಸ್ ಪಕ್ಷದ ಬಾಗಿಲು ಮುಚ್ಚಲೂ ಹಿಂಬಾಲಕರು ಸಿಗಲಾರರು!' ಎಂದು ಬಿಜೆಪಿ ಲೇವಡಿ ಮಾಡಿದೆ.

‘ಬಿರುಕು ಬಿಟ್ಟಿರುವ ಕಾಂಗ್ರೆಸ್ ಮನೆ ಸಿದ್ದರಾಮೋತ್ಸವದ ಬಳಿಕ ನೆಲಸಮವಾಗಲಿದೆ. ಮನೆಯೊಳಗಿದ್ದವರು ಗುಳೆ ಹೊರಡಲನುವಾಗಿದ್ದಾರೆ. ಅಕ್ಟೊಬರ್ ತಿಂಗಳಲ್ಲಿ ನಡೆಲಿರುವ ‘ಭಾರತ್ ಜೋಡೋ' ಅಭಿಯಾನಕ್ಕೂ ನಾಯಕರು ಸಿಗಲಾರದಷ್ಟು ಕಾಂಗ್ರೆಸ್ ಖಾಲಿಯಾಗಲಿದೆ. ಭಾರತ್ ಜೋಡೋ ಅಭಿಯಾನ ಮತ್ತು ಸಿದ್ದರಾಮೋತ್ಸವ! ಈ ಎರಡು ಕಾರ್ಯಕ್ರಮಗಳು ಕಾಂಗ್ರೆಸ್ ಪಕ್ಷವನ್ನು ಮಕಾಡೆ ಮಲಗಿಸಲಿದೆ' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ತುಷ್ಟೀಕರಣಕ್ಕೆ ಪ್ರತಿಫಲ

‘ಸಿದ್ದರಾಮೋತ್ಸವದ ಹೆಸರಿನಲ್ಲಿ ಎತ್ತಿದ ಚಂದಾ ಹಣವನ್ನು ಸಿದ್ದರಾಮಯ್ಯ ದರ್ಪ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು ಸಿದ್ದರಾಮಯ್ಯನವರ ಜಾತ್ರೆ. ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮನಃಸ್ಥಿತಿಗೆ ಈ ಮಹಿಳೆ ಕಪಾಳಮೋಕ್ಷ ಮಾಡಿರುವುದು ಸಿದ್ದರಾಮಯ್ಯ ಅವರ ತುಷ್ಟೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ. ಹಣ ನೀಡಿ ಧರ್ಮ ಸಂಘರ್ಷ ಸೃಷ್ಟಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ವಿಫಲವಾಗಿದೆ. ವಿಪಕ್ಷ ನಾಯಕರೆ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ. ಚಂದಾ ಎತ್ತಿ ‘ಬಂಡವಾಳ' ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು?'

-ನಳಿನ್ ಕುಮಾರ್ ಕಟೀಲ್ ಬಿಜೆಪಿ ರಾಜ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News