1222 ಅಗ್ನಿಶಾಮಕ ದಳದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-07-15 18:57 GMT

ಬೆಂಗಳೂರು, ಜು.15: ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯಲ್ಲಿ ಖಾಲಿಯಿರುವ ಫೈರ್‍ಮನ್ ಹುದ್ದೆಗಳಿಗೆ ಆಯ್ಕೆಯಾಗಿ, ನೇಮಕಾತಿ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಲು ಗೃಹ ಸಚಿವ ಆರಗ ಜ್ಞಾನೇಂದ್ರ ನಿರ್ದೇಶನ ನೀಡಿದ್ದಾರೆ.

ಈ ಬಗ್ಗೆ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯು ಕ್ರಮ ಕೈಗೊಂಡಿದ್ದು, ಇದುವರೆಗೆ ಒಟ್ಟು 607 ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದಿದ್ದಾರೆ. ಇನ್ನುಳಿದ ಅಭ್ಯರ್ಥಿಗಳ ಆಯ್ಕೆ ಸಿಂಧುತ್ವವನ್ನೂ ಪಡೆದಿದ್ದು, ನೇಮಕಾತಿ ಆದೇಶ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರಕಾರವು ರಾಜ್ಯದ ಎಲ್ಲ್ಲ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳನ್ನು ಆದ್ಯತೆ ಮೇರೆಗೆ ಸ್ಥಾಪಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದೆ. ಇಲಾಖೆಯಲ್ಲಿ ಒಟ್ಟು 7057 ವಿವಿಧ ಶ್ರೇಣಿಯ ಹುದ್ದೆಗಳಿದ್ದು, 2021ನೇ ವರ್ಷದ ಅಂತ್ಯಕ್ಕೆ, ಸುಮಾರು 2627 ಹುದ್ದೆಗಳು ಖಾಲಿಯಿದ್ದು, ಪ್ರಸ್ತುತ ವರ್ಷ 1567 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಅಗ್ನಿಶಾಮಕ ಠಾಣೆಗಳ ಸ್ಥಾಪನೆಗೆ, ಸರಕಾರ ವಿಶೇಷ ಕ್ರಮ ಕೈಗೊಂಡು, ನೂತನ ಕಟ್ಟಡಗಳೂ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News