ಶಿಕ್ಷಣ ನೀತಿಯ ಶಿಫಾರಸು ತೀವ್ರ ಅಪೌಷ್ಟಿಕತೆಗೆ ದಾರಿ

Update: 2022-07-16 05:29 GMT

ರಕ್ತಹೀನತೆ ಮತ್ತು ಅಪೌಷ್ಟಿಕತೆ ಹೆಚ್ಚಾಗಿರುವ ನಮ್ಮ ನಾಡಿನಲ್ಲಿ ಪ್ರೊಟೀನ್, ಕಬ್ಬಿಣಾಂಶ, ವಿಟಮಿನ್‌ಗಳು, ಸ್ವಲ್ಪಮಟ್ಟಿನ ಕೊಬ್ಬಿನಾಂಶ ಇವೆಲ್ಲವೂ ಇರುವ ಮೊಟ್ಟೆಯನ್ನು ಮಗುವಿಗೆ ತಿನ್ನಿಸಿ ಎಂದು ಹೆಚ್ಚಿನ ಪೋಷಕಾಂಶ ತಜ್ಞರು ಹೇಳುತ್ತಾರೆ. ಮಕ್ಕಳಿಗೆ ಅವರ ಪೋಷಕಾಂಶದ ಅವಶ್ಯಕತೆಯನ್ನು ಬಹುತೇಕವಾಗಿ ಮೊಟ್ಟೆಯು ತುಂಬಿಕೊಡುತ್ತದೆ. ಹೆಚ್ಚು ಖರ್ಚಿನದಲ್ಲ, ಬೇಯಿಸಲು ಸುಲಭ, ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಇನ್ನಾವುದೇ ಪೌಷ್ಟಿಕ ಆಹಾರಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಲಬೆರಕೆ ಆಗದಂತಹ ಆಹಾರವೆಂದರೆ ಮೊಟ್ಟೆಯೇ.

ನಮ್ಮ ಮಕ್ಕಳ ಸಂಕಷ್ಟಗಳಿಗೆ ಕೊನೆಯೇ ಇಲ್ಲವೇ? ಪಠ್ಯ ಪುಸ್ತಕದ ತಿದ್ದುಪಡಿಯ ಗದ್ದಲವು ಶಾಲೆ ಶುರುವಾದಾಗಿನಿಂದ ಒಂದೂವರೆ ತಿಂಗಳನ್ನು ನುಂಗಿಹಾಕಿತು. ಇದೀಗ ಬಹುಸಂಖ್ಯಾತ ಜನ ಮಾಂಸಾಹಾರಿಗಳೇ ಇರುವಂತಹ ದೇಶದಲ್ಲಿ ಸಸ್ಯಾಹಾರದ ಶ್ರೇಷ್ಠತೆಯ ಬಗ್ಗೆ ಶಿಕ್ಷಣ ನೀತಿಯ ಶಿಫಾರಸು ಹೊಸ ವಿವಾದಕ್ಕೆ ನಾಂದಿ ಹಾಡಿದೆ. ನಿಮ್ಹಾನ್ಸಿನ ‘ಮಕ್ಕಳು ಮತ್ತು ಹದಿಹರೆಯದವರ ಮನೋವಿಜ್ಞಾನ ವಿಭಾಗ’ದ ಮುಖ್ಯಸ್ಥ, ಜಾನ್ ವಿಜಯ್ ಸಾಗರ್ ನೇತೃತ್ವದ ತಂಡವು ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಲ್ಲಿ ‘ಶಾಲೆಯಲ್ಲಿ ಮೊಟ್ಟೆ ಕೊಡುವುದರ ಔಚಿತ್ಯ’ದ ಪ್ರಶ್ನೆಯನ್ನು ಎತ್ತಿ, ಸಾತ್ವಿಕ ಆಹಾರವು ಮಕ್ಕಳಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸುತ್ತದೆ ಮತ್ತು ಮಾಂಸಾಹಾರವು ದುಷ್ಟ ಪ್ರವೃತ್ತಿಯನ್ನು ಪ್ರಚೋದಿಸುತ್ತದೆ ಎನ್ನುವ ಇವರ ವಾದವು ಪೂರ್ಣ ಅವೈಜ್ಞಾನಿಕವಷ್ಟೇ ಅಲ್ಲ, ಜಾತೀಯತೆಯಿಂದ ಕೂಡಿದ್ದು.

ಇನ್ನೆಷ್ಟು ತಜ್ಞ ವರದಿಗಳು ಬೇಕು ಇವರಿಗೆ? ಇನ್ನೆಷ್ಟು ಮಕ್ಕಳು ರಕ್ತಹೀನತೆಯಿಂದ, ಅಪೌಷ್ಟಿಕತೆಯಿಂದ ಬಳಲಬೇಕು? ದೇಶದ 5 ವರ್ಷದೊಳಗಿನ ಶೇ. 67 ಮಕ್ಕಳು ಅಪೌಷ್ಟಿಕ ಮತ್ತು ರಕ್ತಹೀನರಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸರ್ವೇ 5 ಹೇಳುತ್ತದೆ. ವಿಶ್ವ ಪೌಷ್ಟಿಕಾಂಶ ವರದಿಯ ಪ್ರಕಾರ ಶೇ. 71 ಭಾರತೀಯರು ಪೌಷ್ಟಿಕ ಆಹಾರದಿಂದ ವಂಚಿತರಾಗಿದ್ದಾರೆ. ನಮ್ಮ ದೇಶದಲ್ಲಿ 6 ತಿಂಗಳಿನಿಂದ 23 ತಿಂಗಳೊಳಗಿನ ಮಕ್ಕಳಲ್ಲಿ 89 ಪ್ರತಿಶತ ಮಕ್ಕಳಿಗೆ ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕ ಆಹಾರ ಸಿಗುತ್ತಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಸರ್ವೇ ಹೇಳಿದೆ. ನಮ್ಮ ದೇಶದಲ್ಲಿ ಶೇ. 40 ಮಕ್ಕಳು ಅಪೌಷ್ಟಿಕ ಮತ್ತು ಎತ್ತರದಲ್ಲಿ ಕಡಿಮೆ ಉಳ್ಳವರಾಗಿರುವುದಂತೂ ಹಳೆಯ ಆದರೆ ಪ್ರಸ್ತುತ ವಿಚಾರ.

ರಕ್ತಹೀನತೆ ಮತ್ತು ಅಪೌಷ್ಟಿಕತೆ ಹೆಚ್ಚಾಗಿರುವ ನಮ್ಮ ನಾಡಿನಲ್ಲಿ ಪ್ರೊಟೀನ್, ಕಬ್ಬಿಣಾಂಶ, ವಿಟಮಿನ್ ಗಳು, ಸ್ವಲ್ಪಮಟ್ಟಿನ ಕೊಬ್ಬಿನಾಂಶ ಇವೆಲ್ಲವೂ ಇರುವ ಮೊಟ್ಟೆಯನ್ನು ಮಗುವಿಗೆ ತಿನ್ನಿಸಿ ಎಂದು ಹೆಚ್ಚಿನ ಪೋಷಕಾಂಶ ತಜ್ಞರು ಹೇಳುತ್ತಾರೆ. ಮಕ್ಕಳಿಗೆ ಅವರ ಪೋಷಕಾಂಶದ ಅವಶ್ಯಕತೆಯನ್ನು ಬಹುತೇಕವಾಗಿ ಮೊಟ್ಟೆಯು ತುಂಬಿಕೊಡುತ್ತದೆ. ಹೆಚ್ಚು ಖರ್ಚಿನದಲ್ಲ, ಬೇಯಿಸಲು ಸುಲಭ, ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಇನ್ನಾವುದೇ ಪೌಷ್ಟಿಕ ಆಹಾರಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಕಲಬೆರಕೆ ಆಗದಂತಹ ಆಹಾರವೆಂದರೆ ಮೊಟ್ಟೆಯೇ. ಪಡಿತರದಲ್ಲಿ ಕೊಡುವ ಅಕ್ಕಿ, ಗೋಧಿ, ರಾಗಿ, ಬೇಳೆ ಎಲ್ಲವೂ ಕಲಬೆರಕೆಭರಿತ.

 ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಾಡಿದ ಸರ್ವೇಯು ವಾರಕ್ಕೆರಡುಬಾರಿ ಮೊಟ್ಟೆ ತಿಂದ ಮಕ್ಕಳೆಲ್ಲವೂ ಪೌಷ್ಟಿಕವಾಗಿರುವುದನ್ನು ಎತ್ತಿ ತೋರಿಸಿದೆ. ಮಕ್ಕಳ ಆಹಾರದಲ್ಲಿ ಮೊಟ್ಟೆಯನ್ನೊದಗಿಸುವುದು ಅದೆಷ್ಟು ಮಹತ್ವದ ವಿಚಾರ ಎಂಬುದು ಎಲ್ಲರಿಗೂ ಗೊತ್ತಿರುವಾಗ, ಸಾಮಾಜಿಕ ಆರೋಗ್ಯ ಸಮಸ್ಯೆಯೊಂದಕ್ಕೆ ಮಾಂಸಾಹಾರವೇ ಉತ್ತರವಾಗಿರುವಾಗ ಅದನ್ನು ತಿಂದರೆ ಅನಾರೋಗ್ಯ ಎಂದು ಹೊಸ ವಿವಾದವನ್ನು ಅನವಶ್ಯಕವಾಗಿ ತಂದಿಟ್ಟಿದೆ ಎನ್.ಇ.ಪಿ.

ಶಾಲೆಯಲ್ಲಿ ಕೆಲ ಮಕ್ಕಳಿಗೆ ಮೊಟ್ಟೆಯನ್ನು ಕೊಡುವುದು, ಕೆಲವು ಮಕ್ಕಳು ತಿನ್ನದಿರುವುದು ಮಕ್ಕಳ ಮಧ್ಯೆ ಅಸಮಾನತೆಯನ್ನು ಸೃಷ್ಟಿಸುತ್ತದೆ ಎನ್ನುವುದು ಇವರ ಎರಡನೇ ವಾದ. ಮೊಟ್ಟೆಗೆ ಪರ್ಯಾಯವಾಗಿ ಅವರವರ ಧರ್ಮಕ್ಕೆ ಒಪ್ಪುವಂತಹ ಬಾಳೆಹಣ್ಣು ಮತ್ತೇನೋ ಕೊಡುವುದು ಇದ್ದೇ ಇದೆ. ಯಾವ ಮಗುವಿಗೂ ಅವರಿಗಿಷ್ಟವಿಲ್ಲದ್ದನ್ನು ಒತ್ತಾಯಪೂರ್ವಕ ತಿನ್ನಿಸುವುದು ಹೇಗೆ ತಪ್ಪೋ, ಹಾಗೆಯೇ ಕೆಲವರು ತಿನ್ನುವುದಿಲ್ಲ ಎನ್ನುವ ಕಾರಣಕ್ಕೆ ಬಡ, ಅಪೌಷ್ಟಿಕ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರವನ್ನು ನಿರಾಕರಿಸುವುದೂ ಅಷ್ಟೇ ತಪ್ಪಾಗುತ್ತದೆ. ಮಕ್ಕಳಲ್ಲಿ ವೈವಿಧ್ಯವನ್ನು ಅರ್ಥಮಾಡಿಸುವುದು, ಒಳಗೊಳ್ಳುವಿಕೆಯನ್ನು ಕಲಿಸುವುದು ಶಾಲೆಯಲ್ಲಿ ಮಾತ್ರವೇ ಸಾಧ್ಯವಾಗುವುದು. ಹಾಗೆಯೇ ಬೇರೆ ಬೇರೆ ವಿಧದ ಆಹಾರವನ್ನು, ನಾವು ತಿನ್ನದಿದ್ದರೂ ಬೇರೆಯವರು ತಿನ್ನಬಹುದು ಎನ್ನುವುದನ್ನು ಮಕ್ಕಳು ಕಲಿಯುವುದು ಶಾಲೆಯಲ್ಲಿಯೇ.

ಮಕ್ಕಳ ಅಪೌಷ್ಟಿಕತೆಯನ್ನು ನಿವಾರಿಸಲು ಹೊಸ ಹೊಸ ದಾರಿಗಳನ್ನು ಹುಡುಕಬೇಕಾಗಿದೆ. ಈ ಬಗ್ಗೆ ಎಲ್ಲರೂ ಒಗ್ಗೂಡಿ ತಲೆಕೆಡಿಸಿಕೊಳ್ಳಬೇಕಾಗಿದೆ. ವೈವಿಧ್ಯಮಯವಾದ ಆಹಾರವು ಮಕ್ಕಳಿಗೆ ಸಿಗಬೇಕು, ಶಾಲೆಯಲ್ಲಿ, ಅಂಗನವಾಡಿಗಳಲ್ಲಿ ಮತ್ತು ಇನ್ನಾವುದೇ ಸಾರ್ವತ್ರಿಕ ಕಾರ್ಯಕ್ರಮಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರವನ್ನು ಕೊಡುವ ಬಗ್ಗೆ ಚಿಂತಿಸಬೇಕೇ ಹೊರತು, ಇದ್ದುದನ್ನು ತೆಗೆದು ಮಕ್ಕಳ ಹೊಟ್ಟೆಯನ್ನು ಇನ್ನೂ ಬಡವಾಗಿಸುವುದಲ್ಲ. ಮೊಟ್ಟೆ ಮತ್ತು ಮಾಂಸಾಹಾರ ತಿಂದು ಬೆಳೆದರೆ ದುಷ್ಟ ಪ್ರವೃತ್ತಿಯು ಹೆಚ್ಚಾಗುತ್ತದೆಂಬ ಅವೈಜ್ಞಾನಿಕ ವಿಚಾರಗಳನ್ನು ತಂದುಹಾಕುವುದು ತರವಲ್ಲ. ಅದು ಸಾರ್ವಜನಿಕ ಆಹಾರ ಮತ್ತು ಆರೋಗ್ಯ ಮತ್ತು ವಿಜ್ಞಾನದ ಬಹಳ ತಪ್ಪು ನಿರ್ಧಾರವಾಗುತ್ತದೆ.

ಈಗಾಗಲೇ ಭಾರತದ ಅನೇಕ ಭಾಗಗಳಲ್ಲಿ ಮಾಂಸಾಹಾರ ತಿನ್ನುವವರ ಮೇಲೆ ಬೇರೆ ಬೇರೆ ರೀತಿಯ ದಾಳಿಗಳು ನಡೆದಿವೆ ಎಷ್ಟೋ ಶಹರಗಳಲ್ಲಿ ಮಾಂಸದಂಗಡಿಗಳನ್ನು ನಿಷೇಧಿಸಬೇಕೆಂಬ ಒತ್ತಾಯವಿದೆ. ಅನ್ಯ ಧರ್ಮೀಯರು ಕತ್ತರಿಸಿಕೊಟ್ಟ ಮಾಂಸವನ್ನು ಕೊಳ್ಳಬೇಡಿ ಎಂಬ ಪ್ರಚಾರವೂ ನಡೆದಿವೆ. ಅಂತಹ ಅನೇಕ ಪ್ರಕರಣಗಳ ಸಾಲಿನಲ್ಲಿಯೇ ಈ ಪಾಲಿಸಿ ಪೇಪರ್ ಈಗ ಬಂದು ನಿಂತಿದೆ. ಅಂತಹ ಪ್ರಕರಣಗಳು ಹೇಗೆ ಕೆಲವು ಜನರ ಜೀವನೋಪಾಯವನ್ನೇ ಕಿತ್ತುಕೊಂಡಿತೋ ಹಾಗೆಯೇ ಇದೂ ಕೂಡ ಪ್ರಾಣಿ ಸಾಕುವವರ, ಮಾಂಸ ಮಾರುವವರಂತಹ ಅನೇಕರ ಜೀವನೋಪಾಯಕ್ಕೆ ಧಕ್ಕೆ ತರಬಲ್ಲದು. ಇವರೆಲ್ಲ ಹಿಂದುಳಿದ, ಅಲ್ಪಸಂಖ್ಯಾತ ವರ್ಗದವರೆಂದು ಬೇರೆ ಹೇಳಬೇಕಾಗಿಲ್ಲ. ಮತ್ತು ಅಪೌಷ್ಟಿಕತೆಯಿಂದ ಕೂಡಿದ ಮಕ್ಕಳು ಇರುವುದು ಈ ಸಮುದಾಯಗಳ ಕುಟುಂಬಗಳಲ್ಲಿಯೇ.

‘ಆಹಾರದ ಹಕ್ಕಿಗಾಗಿ ಆಂದೋಲನ’ವು ಶಿಕ್ಷಣದ ಇಂತಹ ನೀತಿ ನಿರೂಪಣೆಯನ್ನು ಖಂಡಿಸುತ್ತದೆ. ದೇಶದ ಅಪೌಷ್ಟಿಕತೆಯಂತಹ ತೀವ್ರ ಸಮಸ್ಯೆಗಳನ್ನು -ಸ್ಥಳೀಯ ಆಹಾರ ವೈವಿಧ್ಯವನ್ನು ಹೆಚ್ಚಿಸಿ ಮಕ್ಕಳಿಗೆ ಹೆಚ್ಚು ವೈವಿಧ್ಯಮಯವಾದ, ಪೌಷ್ಟಿಕವಾದಂತಹ ಆಹಾರ ಸಿಗುವಂತೆ ಮಾಡಿ ಬಗೆಹರಿಸಲಿಕ್ಕಾಗದೆಯೇ, ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಮಾಡುತ್ತಿರುವ ದುಷ್ಟ ವಿಚಾರವಿದು. ಮಕ್ಕಳಿಗೆ ಆರೋಗ್ಯಪೂರ್ಣವಾದ ಆಹಾರ ಕೊಡುವುದರ ಬದಲಿಗೆ ಅವರಲ್ಲಿ ಜಾತಿ ತಾರತಮ್ಯವನ್ನು ಹೆಚ್ಚಿಸುವಂತಹ ನೀತಿ ನಿರ್ದೇಶನವಿದು.

Writer - ಶಾರದಾ ಗೋಪಾಲ

contributor

Editor - ಶಾರದಾ ಗೋಪಾಲ

contributor

Similar News