ಚಿಕ್ಕಮಗಳೂರು: ನಿಲ್ಲದ ಮಳೆ ಆರ್ಭಟ; ಮುಂದುವರಿದ ಅನಾಹುತಗಳ ಸರಣಿ

Update: 2022-07-16 12:59 GMT

ಚಿಕ್ಕಮಗಳೂರು, ಜು.16: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಪ್ರಮುಖ ನದಿಗಳು, ಹಳ್ಳಕೊಳ್ಳಗಳು ಅಪಾಯದ ಮಟ್ಟದಲ್ಲೇ ಹರಿಯುತ್ತಿವೆ. ಭಾರೀ ಮಳೆಯಿಂದಾಗಿ ಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಕಳಸ ಸಮೀಪದ ಜಾಂಬಳೆ ಎಂಬಲ್ಲಿ ಕಳಸ-ಮಂಗಳೂರು ಸಂಪರ್ಕದ ಹೆದ್ದಾರಿ ಮೇಲೆ ನದಿಯ ನೆರೆ ನೀರು ಹರಿದು ವಾಹನ ಸಂಚಾರಕ್ಕೆ ತೊಂದರೆಯಾಗಿದ್ದ ಘಟನೆ ವರದಿಯಾಗಿದೆ. 

ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರಿದಿರುವುದರಿಂದ ಜನಜೀವನ ಅಸ್ತಸವ್ಯಸ್ತಗೊಂಡಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯಮಟ್ಟದಲ್ಲೇ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳ ಜನರು ಭಯದಲ್ಲಿ ಬದುಕುವಂತಾಗಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ, ನರಸಿಂಹರಾಜಪುರ, ಕಳಸ ಭಾಗದಲ್ಲಿ ಭಾರೀ ಮಳೆ ನಿಲ್ಲುವ ಸೂಚನೆ ಇಲ್ಲದಂತಾಗಿದೆ. ಮಲೆನಾಡಿನಾದ್ಯಂತ ಹಳ್ಳಗಳು, ಕೆರೆಕಟ್ಟೆಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬಾರದಂತಾಗಿದೆ. ನಿರಂತರ ಮಳೆ ಪರಿಣಾಮ ಕಾಫಿ, ಅಡಿಕೆ, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗೂ ಹಿನ್ನಡೆಯಾಗಿದೆ. ಕಾಫಿ, ಅಡಿಕೆ ಬೆಳೆ ಕೊಳೆ ರೋಗಕ್ಕೆ ತುತ್ತಾಗಿದ್ದರೇ, ಬಯಲು ಭಾಗದಲ್ಲಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ, ರಾಗಿ, ಜೋಳದಂತಹ ಬೆಳೆಗಳು ಮಳೆ ಹೊಡೆತಕ್ಕೆ ಸಿಲುಕಿ ಕೊಳೆಯಲಾರಂಭಿಸಿವೆ.

ಜಿಲ್ಲೆಯ ಮಲೆನಾಡು ಮೂಡಿಗೆರೆ, ಕಳಸ, ಶೃಂಗೇರಿ ಭಾಗದಲ್ಲಿ ನಿರಂತರ ಮಳೆಗೆ ಅಲ್ಲಲ್ಲಿ ಗುಡ್ಡಕುಸಿತ ಉಂಟಾಗಿದೆ. ರಸ್ತೆಗಳಿಗೂ ಹಾನಿಯಾಗಿದೆ. ವಿದ್ಯುತ್ ಕಂಬಗಳು, ಮರಗಳು ಪ್ರತಿದಿನ ಧರೆಗುರುಳುತ್ತಿವೆ. ಹಳ್ಳಗಳ ನೀರು ಸಂಪರ್ಕ ರಸ್ತೆ ಮೇಲೆ ಹರಿಯುತ್ತಿರುವುದರಿಂದ ಕೆಲವು ಗ್ರಾಮಗಳು ಸಂಪರ್ಕವನ್ನು ಕಡಿದುಕೊಂಡಿವೆ. ಅನೇಕ ಮನೆಗಳು ಧರೆಗುರುಳಿ ಬಿದ್ದಿವೆ. ಕುದುರೆಮುಖ, ಕಳಸ, ಜಾಂಬಳೆ ಭಾಗದಲ್ಲಿ ಶನಿವಾರ ರಾತ್ರಿ, ಬೆಳಗ್ಗೆ ಭಾರೀ ಮಳೆ ಸುರಿದ ಪರಿಣಾಮ ಶುಕ್ರವಾರ ಬೆಳಗ್ಗೆ ಕಳಸ ಸಮೀಪದ ಜಾಂಬಳೆ ಗ್ರಾಮದ ಮೂಲಕ ಹಾದು ಹೋಗಿರುವ ಕಳಸ-ಮಂಗಳೂರು ಸಂಪರ್ಕದ ಹೆದ್ದಾರಿ ಮೇಲೆ ಭದ್ರಾ ನದಿಯ ನೆರೆ ನೀರು ಸುಮಾರು 3 ಅಡಿಗಳಷ್ಟು ನಿಂತ ಪರಿಣಾಮ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.

ಚಿಕ್ಕಮಗಳೂರು, ಕಡೂರು, ತರೀಕೆರೆ ಭಾಗದಲ್ಲಿ ಮಳೆಯ ಅಬ್ಬರ ಸ್ವಲ್ಪಮಟ್ಟಿಗೆ ಕಡಿಮೆಯಾಗಿದೆಯಾದರೂ ಆಗಾಗ್ಗೆ ಧಾರಾಕಾರ ಮಳೆಯಾಗುತ್ತಿದ್ದು, ಮೂರು ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ.

ನದಿಗಳಲ್ಲಿ ತೇಲಿ ಬರುತ್ತಿರುವ ಮೂಕ ಪ್ರಾಣಿಗಳ ಕಳೇಬರ: ಜಿಲ್ಲೆಯಾದ್ಯಂತ ಅಬ್ಬರಿಸುತ್ತಿರುವ ಮಳೆಗೆ ಮೂಕ ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಮೇವನ್ನು ಅರಸಿ ನದಿ ತೀರಕ್ಕೆ ಹೋಗಿದ್ದ ಹಸುಗಳು ನದಿ ನೀರಿನಲ್ಲಿ ಕೊಚ್ಚ ಹೋಗುತ್ತಿವೆ. ಶುಕ್ರವಾರ ಸಂಜೆ ಕಳಸ ಹೊರನಾಡು ಸಂಪರ್ಕದ ಹೆಬ್ಬಾಳೆ ಸೇತುವೆ ಬಳಿ ಭದ್ರಾ ನದಿಯಲ್ಲಿ ತೇಲಿ ಬಂದ ಹಸುವಿನ ಕಳೇಬರ ಹೆಬ್ಬಾಳೆ ಸೇತುವೆ ಮೇಲೆ ಸಿಲುಕಿಕೊಂಡಿತ್ತು. ಮಲೆನಾಡು ಭಾಗದಲ್ಲಿ ನಿರಂತರ ಮಳೆಯಿಂದಾಗಿ ಶೀತ ವಾತಾವರಣಕ್ಕೂ ಜಾನುವಾರುಗಳು ಬಲಿಯಾಗುತ್ತಿವೆ.

ಜಿಲ್ಲಾದ್ಯಂತ 328 ಮನೆಗಳಿಗೆ ಹಾನಿ: ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ 35 ಮನೆಗಳಿಗೆ ಹಾನಿಯಾಗಿದೆ. 4 ಮನೆಗಳು ಸಂಪೂರ್ಣವಾಗಿ ಕುಸಿದಿವೆ. 12 ಮನೆಗಳಿಗೆ ಶೇ.25ರಿಂದ 75ರಷ್ಟು ಹಾನಿಯಾಗಿದೆ. 19 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. ಜೂನ್ ತಿಂಗಳಿಂದ ಇಲ್ಲಿವರೆಗೂ ಜಿಲ್ಲೆಯಲ್ಲಿ ಮಳೆಯಿಂದ 328 ಮನೆಗಳಿಗೆ ಹಾನಿಯಾಗಿದೆ. 44 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 97 ಮನೆಗಳಿಗೆ ಶೇ.25ರಿಂದ 75ರಷ್ಟು ಹಾನಿಯಾಗಿದೆ. 187 ಮನೆಗಳಿಗೆ ಶೇ.15ರಿಂದ 25ರಷ್ಟು ಹಾನಿಯಾಗಿದೆ. 13 ಗುಡಿಸಲುಗಳಿಗೆ ಹಾನಿಯಾಗಿದೆ. ಮಳೆಯಿಂದಾಗಿ ಇಬ್ಬರು ಮಹಿಳೆಯರು ಮೃತಪಟ್ಟಿದ್ದು, ಓರ್ವ ಶಾಲಾ ಬಾಲಕಿ ಸೇರಿ ಇಬ್ಬರು ಹಳ್ಳದಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರ ಶೋಧ ಕಾರ್ಯ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News