ಕಾರಾಗೃಹಗಳಲಿನ ಕೈದಿಗಳಿಗೆ ಕನಿಷ್ಠ ಕೂಲಿ ನಿಗದಿ: ಗೃಹ ಸಚಿವ ಆರಗ ಜ್ಞಾನೇಂದ್ರ

Update: 2022-07-16 14:19 GMT
ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು, ಜು. 16: ‘ರಾಜ್ಯದಲ್ಲಿನ ಎಲ್ಲ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ಕೂಲಿಯನ್ನು ನೀಡಲಾಗುವುದು' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದಿಲ್ಲಿ ತಿಳಿಸಿದ್ದಾರೆ.

ಶನಿವಾರ ವಿಕಾಸಸೌಧದಲ್ಲಿ ‘ಕಾರಾಗೃಹ ಅಭಿವೃದ್ದಿ ಮಂಡಳಿ' ಪ್ರಥಮ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಮಿಕ ಇಲಾಖೆ ನಿಗದಿಪಡಿಸಿರುವ ಕನಿಷ್ಠ ಕೂಲಿ ಕೈದಿಗಳಿಗೂ ಕೊಡುವ ಸಂಬಂಧ ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು, ಆರ್ಥಿಕ ಇಲಾಖೆ ಒಪ್ಪಿಗೆ ಪಡೆದು ಕನಿಷ್ಠ ಕೂಲಿ ನೀಡಲು ನಿರ್ಧರಿಸಲಾಗಿದೆ' ಎಂದರು.

‘ಹಣಕಾಸು ಇಲಾಖೆ ಕೈದಿಗಳಿಗೆ ಕನಿಷ್ಠ ಕೂಲಿ ಕೊಡಲು ಈಗಾಗಲೇ 7 ಕೋಟಿ ರೂ.ಗಳ ವಿಶೇಷ ಅನುದಾನ ಬಿಡುಗಡೆಗೆ ಪ್ರಕ್ರಿಯೆ ಆರಂಭಿಸಿದೆ' ಎಂದ ಅವರು, ‘ಕಾರಾಗೃಹಗಳಲ್ಲಿನ ಕೈದಿಗಳ ಮಾನವ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಿದ್ದು, ಆ ನಿಟ್ಟಿನಲ್ಲಿ ಅಗತ್ಯ ಯೋಜನೆ ರೂಪಿಸಲಾಗುತ್ತಿದೆ' ಎಂದು ಹೇಳಿದರು.

‘ಕೇಂದ್ರ ಕಾರಾಗೃಹಗಳಲ್ಲಿನ ಕೈದಿಗಳ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಸಂಪನ್ಮೂಲವನ್ನಾಗಿ ಪರಿವರ್ತಿಸಲಾಗುವುದು. ಅಲ್ಲದೆ, ಚಾಲ್ತಿಯಲ್ಲಿನ ಕೈಗಾರಿಕಾ ಚಟುವಟಿಕೆಗಳಿಗೆ ಕಾರ್ಪೋರೇಟ್ ಸ್ವರೂಪವನ್ನು ನೀಡುವ ನಿಟ್ಟಿನಲ್ಲಿ ಸರಕಾರ ಪ್ರಯತ್ನ ನಡೆಸಿದೆ' ಎಂದ ಅವರು, ‘ಕಾರಾಗೃಹಗಳಲ್ಲಿ ಪ್ರಸ್ತುತ, ನೇಯ್ಗೆ, ಮರಗೆಲಸ, ಬೇಕರಿ, ಜಮಖಾನ, ಶಾಮಿಯಾನ, ಸೋಪ್ ಹಾಗೂ ಇನ್ನಿತರ ಕೈಗಾರಿಕ ಚಟುವಟಿಕೆಗಳು ನಡೆಸಲಾಗುತ್ತಿದೆ' ಎಂದು ವಿವರಿಸಿದರು.

‘ಹಾಲಿ ಇರುವ ಯಂತ್ರೋಪಕರಣಗಳ ಉನ್ನತೀಕರಣಗೊಳಿಸಲಾಗುವುದು. ಅಲ್ಲದೆ, ಕೈದಿಗಳಿಗೆ ವೃತ್ತಿಯಲ್ಲಿ ನೈಪುಣ್ಯತೆ ಒಳಗೊಂಡಂತೆ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಕೈದಿಗಳಿಗೂ ಆರ್ಥಿಕವಾಗಿ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಸಮಾಲೋಚನೆ ನಡೆಸಲಾಗಿದೆ' ಎಂದು ಆರಗ ಜ್ಞಾನೇಂದ್ರ ಹೇಳಿದರು.

ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಕಾರಾಗೃಹಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

‘ಕಾರ್ಮಿಕ ಇಲಾಖೆಯೂ ಕೌಶಲ್ಯವುಳ್ಳ ಕಾರ್ಮಿಕರಿಗೆ ಮತ್ತು ಕೌಶಲ್ಯರಹಿತ ಕಾರ್ಮಿಕರಿಗೆ ಪ್ರತ್ಯೇಕವಾಗಿ ಕನಿಷ್ಠ ಕೂಲಿ ನಿಗದಿಪಡಿಸಿದ್ದು, ಕುಶಲ ಕಾರ್ಮಿಕರಿಗೆ ಅಂದಾಜು ದಿನಕ್ಕೆ ಕನಿಷ್ಠ ಕೂಲಿ 450 ರೂ. ಹಾಗೂ ಕೌಶಲ್ಯರಹಿತ ಕಾರ್ಮಿಕರಿಗೆ 275 ರೂ.ನಿಂದ 375 ರೂ.ವರೆಗೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ'

‘ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 1 ಲಕ್ಷ ಪೊಲೀಸ್ ಸಿಬ್ಬಂದಿಯ ಮನೆಯಲ್ಲಿ ರಾಷ್ಟ್ರ ಧ್ವಜ ಹಾರಾಡಲಿದೆ. ಅಲ್ಲದೆ, ಸ್ವಾತಂತ್ರ್ಯೋತ್ಸದ ಅಂಗವಾಗಿ ಸನ್ನಡತೆ ಆಧಾರದಲ್ಲಿ 84 ಕೈದಿಗಳ ಬಿಡುಗಡೆ ಮಾಡಲಾಗುತ್ತಿದೆ'
-ಆರಗ ಜ್ಞಾನೇಂದ್ರ ಗೃಹ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News