ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ವಿಚಾರ: ಸಿದ್ದರಾಮಯ್ಯ ಹೇಳಿದ್ದೇನು?

Update: 2022-07-17 13:57 GMT
ಸಿದ್ದರಾಮಯ್ಯ ( ಫೈಲ್ ಚಿತ್ರ)

ಮೈಸೂರು,ಜು.17: ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ವಿಚಾರದ ಕುರಿತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ. 

''ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಇಲ್ಲ. ಅಭಿಮಾನಿಗಳು ಮತ್ತು ಬೆಂಬಲಿಗರು ನನ್ನನ್ನು ಖುಷಿಪಡಿಸಲೂ ಈ ವಿಚಾರ ಮತ್ತೆ ಪ್ರಸ್ತಾಪ ಮಾಡಬಾರದು'' ಎಂದು ಸಿದ್ದರಾಮಯ್ಯ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಸ್ಪಷ್ಟಪಡಿಸಿದ್ದಾರೆ. 

ನಗರದ ಕಾಂಗ್ರೆಸ್ ಭವನದಲ್ಲಿ ರವಿವಾರ ನಡೆದ ಸಮಾರಂಭದಲ್ಲಿ ಚಾಮುಂಡೇಶ್ವರಿ ಮತ್ತು ಇಲವಾಲ, ಜಯಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಮುಂಚೂಣಿ ಘಟಕಗಳ ಪದಗ್ರಹಣ ಸಮಾರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ.ಮರಿಗೌಡ, ಸಿದ್ದರಾಮಯ್ಯ ಅವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂದು ಒತ್ತಾಯ ಮಾಡಿದರು. 

ಈ ವಿಚಾರ ಪ್ರಸ್ತಾಪವೂ ಸಭೆಯಲ್ಲಿ ಗದ್ದಲ ಸೃಷ್ಟಿಸಿತು. ಮುಖಂಡ ಬಸವರಾಜು ವಿಚಾರ ಪ್ರಸ್ತಾಪಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಸೂರಿ ಎಂಬವರು ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಬೇಕೆಂದು ಒತ್ತಾಯಿಸಿದರು. ಆಗಿರುವ ತಪ್ಪನ್ನು ಸರಿಪಡಿಸಲು ತಾವು ಮತ್ತೆ ಸ್ಪರ್ಧೆ ಮಾಡಬೇಕೆಂದು ಒತ್ತಾಯಿಸಿದರು. ತಮ್ಮ ಬೆಂಬಲಿಗರೇ ಅನ್ಯಾಯ ಮಾಡಿದರೆಂದು ಮತ್ತೊಬ್ಬರು ಜೋರು ದನಿಯಲ್ಲಿ ಹೇಳಿದರು. 

ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 5 ಚುನಾವಣೆಗಳಲ್ಲಿ ಗೆದ್ದಿದ್ದೇನೆ. 3ರಲ್ಲಿ ಸೋಲು ಕಂಡಿದ್ದೇನೆ. 10 ವರ್ಷ ವರುಣಾದಿಂದ ಸ್ಪರ್ಧೆ ಮಾಡಿದ್ದೆ. 2018ರಲ್ಲಿ ಮತ್ತೆ ಸ್ಪರ್ಧಿಸಿ ಸೋಲು ಕಂಡಿದ್ದೇನೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ತಾನು ಸೋಲು-ಗೆಲುವನ್ನು ಸಹಜವಾಗಿ ಸ್ವೀಕರಿಸಿದ್ದೇನೆ. ಜನರು ಆಶೀರ್ವಾದ ಮಾಡಲಿಲ್ಲ. ಸೋತಿದ್ದಕ್ಕೆ ವ್ಯಥೆ ಪಟ್ಟಿಲ್ಲ. ಬಾದಾಮಿಯಲ್ಲಿ 2 ದಿನ ಪ್ರಚಾರ ಮಾಡಿದರೂ ಜನರು ಗೆಲ್ಲಿಸಿದರು ಎಂದರು. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅನೇಕ ಬೂತ್‍ಗಳಲ್ಲಿ ಪಕ್ಷದ ಕಾರ್ಯಕರ್ತರು ಇರಲಿಲ್ಲ. ಬೂತ್ ಮಟ್ಟದ ಕಾರ್ಯಕರ್ತರು ಇಲ್ಲದ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಬಗ್ಗೆ ಕೋಪ ಇಲ್ಲ. ಕಾರ್ಯಕರ್ತರ ಮೇಲೆಯೇ ಕೋಪ ಎಂದು ನುಡಿದರು. 

1983ರಲ್ಲಿ ಮೊದಲ ಚುನಾವಣೆ ಎದುರಿಸಿದೆ. ಅವತ್ತು ಕ್ಷೇತ್ರ ಯಾವ ರೀತಿ ಇತ್ತು? ಇವತ್ತು ಹೆಂಗಿದೆ? ಜ್ಞಾಪಕ ಮಾಡಿಕೊಳ್ಳಬೇಕು. ಈಗಿನ ಶಾಸಕರು 10 ವರ್ಷಗಳಿಂದ ಏನು ಮಾಡಿದ್ದಾರೆ ಆಲೋಚಿಸಬೇಕು. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ ಸಿಕ್ಕಿದ್ದರೆ ಅದು ಸಿದ್ದರಾಮಯ್ಯನಿಂದ ಎಂದು ಹೇಳಿದರು. 

ಕೆಲಸದ ಆಧಾರದಲ್ಲಿ ಜನರು ಮತ ನೀಡಿದ್ದರೆ ನಾನು ಸೋಲುತ್ತಿರಲಿಲ್ಲ. ಮೈಸೂರಿನಲ್ಲಿ ವಾಸು, ಎಂ.ಕೆ.ಸೋಮಶೇಖರ್ ಸೋಲಬೇಕಿರಲಿಲ್ಲ. ಜನರಿಗೆ ಕೆಲಸಕ್ಕಿಂತ ಜಾತಿ, ದುಡ್ಡಿನ ಮೇಲೆ ಮತ ನೀಡುತ್ತಿದ್ದಾರೆ. ಮೈಸೂರಿಗೆ ಕೋಟ್ಯಂತರ ರೂಪಾಯಿ ಕೊಟ್ಟರೂ ಸೋಲಿಸಿದರು. ಹಿಂದೆ ಕಾಂಗ್ರೆಸ್ಸಿನಿಂದ ಬಿ ಫಾರಂ ಪಡೆದರೆ ಗೆಲ್ಲುತ್ತಾರೆ ಎನ್ನಲಾಗುತ್ತಿತ್ತು. ಇವತ್ತು ಆ ಪರಿಸ್ಥಿತಿ ಇಲ್ಲ ಎಂದರು.

ಸಂಸದ ಪ್ರತಾಪ ಸಿಂಹ ಸುಳ್ಳು ಹೇಳುತ್ತಾನೆ. ದಶಪಥ, ಉಂಡವಾಡಿ ನಮ್ಮ ಕಾಲದ ಯೋಜನೆಗಳು. 8 ವರ್ಷಗಳಲ್ಲಿ ಮೈಸೂರಿಗೆ ಅವರ ಕೊಡುಗೆ ಏನು? ಸುಳ್ಳು ಹೇಳಲು ಇತಿಮಿತಿ ಇರಬೇಕು. ಖಾಲಿ ಡಬ್ಬ ಹೊಡೆಯೋದು ಸುಳ್ಳನ್ನು ಪದೇ ಪದೇ ಹೇಳುವುದೇ ಅವರ ಕಾಯಕ. ಆದರೆ ಕಾಂಗ್ರೆಸ್ ಕಾರ್ಯಕರ್ತರು ಇದನ್ನು ಪ್ರಶ್ನಿಸುವುದಿಲ್ಲ. ಮನೆ ಮನೆಗೆ ಹೋಗಿ ನಮ್ಮ ಕಾರ್ಯಕ್ರಮಗಳನ್ನು ಹೇಳದಿದ್ದರಿಂದ ಉತ್ತಮ ಆಡಳಿತ ನೀಡಿಯೂ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ಜಾರಿ ಮಾಡುತ್ತೇವೆ. ಎಸ್‍ಟಿ ಮೀಸಲು ಹೆಚ್ಚಿಸುವುದಾಗಿ ಹೇಳಿದ್ದರು. ಅಧಿಕಾರಕ್ಕೆ ಬಂದ ತಿಂಗಳಲ್ಲಿಯೇ ಮೀಸಲು ಹೆಚ್ಚಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಶ್ರೀರಾಮುಲು ಹೇಳಿದ್ದರು? ಏನಾಯಿತು. ವಾಲ್ಮೀಕಿ ಸಮಾಜದ ಸ್ವಾಮೀಜಿ 155 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಯಾಕೇ ಪ್ರಶ್ನಿಸುತ್ತಿಲ್ಲ ಎಂದು ನುಡಿದರು.

ಕುಮಾರಸ್ವಾಮಿ ತಾಜ್ ಹೋಟೆಲ್‍ನಲ್ಲಿ ಉಳಿಯದೇ ಶಾಸಕರ ಕಷ್ಟ ಕೇಳಿದ್ದರೆ ಸರ್ಕಾರ ಬೀಳುತ್ತಿರಲಿಲ್ಲ. ಸರ್ಕಾರ ಬೀಳಲೆಂದೇ ವಿದೇಶ ಪ್ರವಾಸ ಹೋಗಿರುವುದಾಗಿ ಹೇಳುತ್ತಿದ್ದಾರೆ. ಅದನ್ನು ಆಗ ಯಾಕೇ ಹೇಳಲಿಲ್ಲ. ರಾಷ್ಟ್ರಪತಿ ಚುನಾವಣೆ ಸಂಬಂಧ ಮಮತಾ ಬ್ಯಾನರ್ಜಿ ಸಭೆಯಲ್ಲಿ ಭಾಗವಹಿಸಿದ್ದ ಎಚ್.ಡಿ.ದೇವೇಗೌಡರು ಈಗ ಎನ್‍ಡಿಎ ಅಭ್ಯರ್ಥಿ ಯಾಕೇ ಬೆಂಬಲಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು. 

ಕೊನೇ ಚುನಾವಣೆ: ಬಾದಾಮಿಯಲ್ಲಿ ಮತ್ತೆ ನಿಲ್ಲುವಂತೆ ಒತ್ತಾಯ ಮಾಡುತ್ತಿದ್ದಾರೆ. ಕೋಲಾರ, ಕೊಪ್ಪಳ, ಹುಣಸೂರು ಮತ್ತು ಬೆಂಗಳೂರಿನಲ್ಲಿ ಸ್ಪರ್ಧಿಸುವಂತೆ ಒತ್ತಾಯ ಬರುತ್ತಿದೆ. ಎಲ್ಲಿ ನಿಲ್ಲಬೇಕೆಂದು ತೀರ್ಮಾನ ಮಾಡಿಲ್ಲ. ಆದರೆ, ಇದೇ ನನ್ನ ಕೊನೇ ಚುನಾವಣೆಯಾಗಿದೆ ಎಂದು ತಿಳಿಸಿದರು.  

ಭ್ರಷ್ಟ, ಕೋಮುವಾದಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಕಾರಣಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ. ಮತ್ತೆ ಸ್ಪರ್ಧೆ ಮಾಡುವುದಿಲ್ಲ. ಯಾವ ಸ್ಥಾನಮಾನವನ್ನು ಸ್ವೀಕರಿಸುವುದಿಲ್ಲ ಎಂದರು. 

ರಾಜ್ಯ ಉಳಿಯಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. 130ರಿಂದ 150 ಸ್ಥಾನ ಗೆಲ್ಲಲೇಬೇಕು. ಮೈಸೂರು 11 ಸ್ಥಾನಗಳಲ್ಲಿ 9 ಸ್ಥಾನ ಗೆಲ್ಲಬೇಕು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ತಮ್ಮ ಒಳಜಗಳ ಬಿಟ್ಟು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು. 

ಸಮಾರಂಬದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಮಾಜಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್, ಶಾಸಕ ಎಚ್.ಪಿ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕರಾದ ವಾಸು, ಎಂ.ಕೆ.ಸೋಮಶೇಖರ್, ಕಳಲೆ ಕೇಶವಮೂರ್ತಿ, ಮುಖಂಡರಾದ ಹರೀಶ್‍ಗೌಡ, ಡಿ.ರವಿಶಂಕರ್, ರಾಕೇಶ್ ಪಾಪಣ್ಣ, ಕೂರ್ಗಳ್ಳಿ ಮಹದೇವು, ಮಂಜುಳಾ ಮಾನಸ, ಪುಷ್ಪಲತಾ ಚಿಕ್ಕಣ್ಣ, ಸಿ.ನರೇಂದ್ರ, ಲತಾ ಸಿದ್ಧಶೆಟ್ಟಿ, ಜೆ.ಸತೀಶ್‍ಕುಮಾರ್, ಮುಂತಾದವರು ಭಾಗವಹಿಸಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News