ನ್ಯಾ.ಎಚ್.ಪಿ.ಸಂದೇಶ್ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ತೆಗೆದು ಹಾಕುವಂತೆ ಐಎಎಸ್ ಅಧಿಕಾರಿ ಮಂಜುನಾಥ್ ಸುಪ್ರೀಂಗೆ

Update: 2022-07-17 14:50 GMT
ನ್ಯಾ.ಎಚ್.ಪಿ.ಸಂದೇಶ್ | ಜೆ.ಮಂಜುನಾಥ್

ಹೊಸದಿಲ್ಲಿ, ಜು.15: ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಜಾಮೀನು ಅರ್ಜಿಯ ವಿಚಾರಣೆ ವೇಳೆ ತಮ್ಮ ಬಗ್ಗೆ ಹೈಕೋರ್ಟ್ ನ್ಯಾ.ಎಚ್.ಪಿ.ಸಂದೇಶ್ ಅವರು ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳನ್ನು ತೆಗೆದು ಹಾಕುವಂತೆ ಕೋರಿ ಐಎಎಸ್ ಅಧಿಕಾರಿ ಜೆ.ಮಂಜುನಾಥ್ ಅವರು ಸುಪ್ರೀಂಕೋರ್ಟ್ ಗೆ  ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ. 

ನೂಲಿ ಅಂಡ್ ನೂಲಿ ಕಾನೂನು ಸಲಹಾ ಸಂಸ್ಥೆ ಮೂಲಕ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿರುವ ಐಎಎಸ್ ಅಧಿಕಾರಿ ಮಂಜುನಾಥ್, ನನ್ನ ವಿರುದ್ಧ ಅನಗತ್ಯವಾಗಿ ಟೀಕೆಗಳನ್ನು ಮಾಡಲಾಗಿದೆ. ನೈಸರ್ಗಿಕ ನ್ಯಾಯ ತತ್ವದಡಿ ವಾದ ಮಂಡಿಸಲು ನ್ಯಾಯಾಲಯ ಅವಕಾಶ ಕಲ್ಪಿಸಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. 

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಎದುರು ಜು.14ರಂದು ಈ ಅರ್ಜಿಯ ಕುರಿತಂತೆ ಹಿರಿಯ ನ್ಯಾಯವಾದಿ ಎಸ್.ನಾಗಮುತ್ತು ಪ್ರಸ್ತಾಪಿಸಿದರು. ಹೈಕೋರ್ಟ್ ನ್ಯಾಸಂದೇಶ್ ಅವರ ಅಭಿಪ್ರಾಯ ಹಾಗೂ ಆದೇಶದ ವಿರುದ್ಧ ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್‌ಸಿಂಗ್ ಈಗಾಗಲೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಇದೇ ಪ್ರಕರಣದಲ್ಲಿ ಕರ್ನಾಟಕ ಸರಕಾರ ಕೂಡ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ಎರಡು ಅರ್ಜಿಗಳ ವಿಚಾರಣೆಯ ವೇಳೆಗೆ ಮಂಜುನಾಥ್ ಅವರ ಅರ್ಜಿಯನ್ನೂ ಕೈಗೆತ್ತಿಕೊಳ್ಳಲು ಪೀಠ ಸಮ್ಮತಿ ಸೂಚಿಸಿತು.

ಹೈಕೋರ್ಟ್ ನ್ಯಾಯಮೂರ್ತಿಯವರು ಅಧಿಕಾರ ವ್ಯಾಪ್ತಿ ಮೀರಿ ಆದೇಶಗಳನ್ನು ಮಾಡಿದ್ದಾರೆ. ಇಂಥ ಅಭಿಪ್ರಾಯಗಳಿಂದ ನ್ಯಾಯಯುತ ತನಿಖೆ ಮೇಲೂ ಪರಿಣಾಮ ಬೀರುತ್ತದೆ ಎಂದು ಮಂಜುನಾಥ್ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. 

ಜಮೀನು ಮಾಲಕತ್ವದ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರ ಪರ ಆದೇಶ ನೀಡಲು ಬೆಂಗಳೂರು ನಗರ ಡಿಸಿ ಹುದ್ದೆಯಲ್ಲಿದ್ದ ಅವಧಿಯಲ್ಲಿ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಜೆ. ಮಂಜುನಾಥ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಜು.4ರಂದು ಬಂಧಿಸಿದ್ದರು. ಅವರ ಜಾಮೀನು ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯವು ಜು.11ರಂದು ವಜಾ ಮಾಡಿತ್ತು. ‘ಸ್ವಯಂ ಎಸಿಬಿಯೇ ಅತಿದೊಡ್ಡ ಭ್ರಷ್ಟರ ಕೂಪವಾಗಿದೆ. ಇದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣಕ್ಕೆ ವರ್ಗಾವಣೆ ಬೆದರಿಕೆ ಬಂದಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಸಂದೇಶ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News