ಕಾನೂನುಬಾಹಿರ ಕೋಚಿಂಗ್ ಕೇಂದ್ರಗಳಿಗೆ ಕಡಿವಾಣ ಹಾಕಲು ರೂಪ್ಸಾ ಮನವಿ

Update: 2022-07-17 15:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.17: ರಾಜ್ಯಾದ್ಯಂತ ನಡೆಸುತ್ತಿರುವ ಕಾನೂನುಬಾಹಿರ ಟ್ಯೂಷನ್, ಕೋಚಿಂಗ್ ಕ್ಲಾಸ್ ಹಾವಳಿಯನ್ನು ತಡೆಗಟ್ಟಲು ರುಪ್ಸಾ ಕರ್ನಾಟಕದ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕ ಶಿಕ್ಷಣ ಕಾಯಿದೆ-1983 ಹಾಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರಂತೆ ಮಾನ್ಯತೆ ಪಡೆದ ರಾಜ್ಯದ ಯಾವುದೇ ಶಾಲಾ ಕಾಲೇಜು ಕೊಠಡಿಗಳಲ್ಲಿ ಅಥವಾ ಆ ಶಾಲೆಗಳಲ್ಲಿ ಸಿಬ್ಬಂದಿಯು ಟ್ಯೂಷನ್ ತರಗತಿಗಳನ್ನು ನಡೆಸಲು ಅವಕಾಶ ಇಲ್ಲ. ಒಂದು ವೇಳೆ ಟ್ಯೂಷನ್ ತರಗತಿ ನಡೆಸಬೇಕಾದರೆ, ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆಯಬೇಕು. ಮಾನ್ಯತೆಯ ಎಲ್ಲ ನಿಯಮಗಳು ಅಂದರೆ ನಿವೇಶನ, ಕಟ್ಟಡ, ಮಕ್ಕಳ ಸುರಕ್ಷತೆಗಳಂತಹ ವಿಚಾರಗಳಲ್ಲಿ ಹೊಸ ಶಾಲೆಗಳಿಗಿರುವ ಮಾನದಂಡಗಳನ್ನು ಅನುಸರಿಸಬೇಕು. ಆದರೆ ರಾಜ್ಯಾದ್ಯಂತ ಸಾವಿರಾರು ಟ್ಯೂಷನ್ ತರಗತಿಗಳು, ಕೋಚಿಂಗ್ ಸೆಂಟರ್ ಗಳು ಮಾನ್ಯತೆ ಪಡೆಯದೆ, ಶಿಕ್ಷಣ ಇಲಾಖೆಯ ನಿಯಮಗಳನ್ನೂ ಪಾಲಿಸದೆ ರಾಜಾರೋಷವಾಗಿ ನಾಯಿ ಕೊಡೆಯಂತೆ ತಲೆ ಎತ್ತಿವೆ ಎಂದು ಪತ್ರದಲ್ಲಿ ಟೀಕಿಸಿದ್ದಾರೆ. 

ಶಾಲಾ ಕಾಲೇಜುಗಳ ಶುಲ್ಕಕ್ಕಿಂತ ಟೂಶನ್ ಶುಲ್ಕವೇ ಹೆಚ್ಚಾಗಿದೆ. ಸಾಮಾನ್ಯ ಸೌಲಭ್ಯಗಳಾದ ಪೀಠೋಪಕರಣ, ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಆಟ, ಸಾಂಸ್ಕೃತಿಕ ಚಟುವಟಿಕೆಗಳನ್ನು ಒದಗಿಸದೆ, ಬೆಳಗ್ಗೆ 7ರಿಂದ ಸಾಯಂಕಾಲದವರೆಗೂ ಮಕ್ಕಳನ್ನು ತರಗತಿಗಳಲ್ಲಿ ಹಿಡಿದಿಟ್ಟು ಶಿಕ್ಷಣದ ಹೆಸರಲ್ಲಿ ಮೋಸ ಮಾಡುತ್ತಿವೆ. ಈ ಸಂಸ್ಥೆಗಳಿಗೆ ಯಾವುದೇ ಸಾಮಾಜಿಕ ಜವಾಬ್ದಾರಿ ಇರುವುದಿಲ್ಲ. ಇವುಗಳನ್ನು ನಿಯಂತ್ರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಕೆಲ ಪ್ರತಿಷ್ಠಿತ ಟ್ಯೂಷನ್ ಕೇಂದ್ರಗಳೊಂದಿಗೆ ಶಾಮಿಲಾಗಿದ್ದಾರೆ. ಇದರಿಂದ ಟೂಶನ್ ಶುಲ್ಕ ನೀಡಲಾಗದ ಬಡ ವಿದ್ಯಾರ್ಥಿಗಳು ತಾವು ಸೇರಿದ ಶಾಲಾ-ಕಾಲೇಜುಗಳಲ್ಲಿ ಸರಿಯಾಗಿ ಪಾಠ ಪ್ರವಚನಗಳು ನಡೆಯದೆ, ಮೂಕ ವೇದನೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ಆಳ್ವಾಸ್, ಎಕ್ಸ್ಪರ್ಟ್, ಬೇಸ್, ರೆಸೋನನ್ಸ್, ಆಕಾಶ್ ಅಲೆನ್, ಬೈಜೂಸ್,  ವೇದಾಂತ್, ಸಂಸ್ಥಗಳೂ ಪಿಯುಸಿ ಕಾಲೇಜುಗಳ ಆವರಣದಲ್ಲಿ ಟ್ಯೂಷನ್ ತರಗತಿಗಳನ್ನು ಬಹಿರಂಗವಾಗಿ ನಡೆಸುತ್ತಿವೆ. ಅಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರನ್ನು ಬಳಸಿಕೊಂಡು ಸರಕಾರಕ್ಕೂ ತೆರಿಗೆ ಕಟ್ಟದೆ, ನೀಟ್, ಜೀ, ಸಿಇಟಿ ಹೆಸರಿನಲ್ಲಿ ಲಕ್ಷಾಂತರ ಶುಲ್ಕ ವಸೂಲಿ ಮಾಡುತ್ತಿವೆ ಎಂದು ಆತಂಕವ್ಯಕ್ತಪಡಿಸಿದ್ದಾರೆ.

ನಾಯಿ ಕೊಡೆಯಂತೆ ತಲೆಯೆತ್ತಿರುವ ಕಾನೂನುಬಾಹಿರ ಟ್ಯೂಷನ್ ತರಗತಿಗಳ ವಿರುದ್ಧ ಕ್ರಮ ಜರುಗಿಸಲು ತಮ್ಮ ಶಿಕ್ಷಣ ಸಚಿವರ ಮೂಲಕ ಇಲಾಖೆಯ ಉನ್ನತಾಧಿಕಾರಿಗಳಿಗೆ ತಾಕೀತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News