×
Ad

ಭಿಕ್ಷಾಟನೆ ಸಂಪೂರ್ಣ ನಿರ್ಮೂಲನೆ: ಜು.18ರಂದು ವಿವಿಧ ಇಲಾಖೆ ಸಚಿವರ ಸಭೆ

Update: 2022-07-17 22:53 IST

ಬೆಂಗಳೂರು, ಜು.17: ರಾಜ್ಯ ಸರಕಾರವು ರಾಜ್ಯದಲ್ಲಿ ಭಿಕ್ಷಾಟನೆಯು ಸಂಪೂರ್ಣ ನಿರ್ಮೂಲನೆಗೆ ಮುಂದಾಗಿದ್ದು, ವಿಕಾಸಸೌಧದಲ್ಲಿ ನಾಳೆ(ಜು.18) ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಚಿವರೊಂದಿಗೆ ಮಹತ್ವದ ಸಭೆ ನಡೆಯಲಿದೆ.

ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರು, ಕಾರ್ಮಿಕ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಭಿಕ್ಷಾಟನೆ ಹೆಸರಿನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜನಸಾಮಾನ್ಯರು ಕಿರಿಕಿರಿ ಅನುಭವಿಸುವುದು ಸೇರಿದಂತೆ ಭಿಕ್ಷಾಟನೆ ನಿರ್ಮೂಲನೆ ಮಾಡುವ ಸಂಬಂಧ ಇತ್ತೀಚಿಗಷ್ಟೇ ಸಭೆ ನಡೆಸಿದ್ದ ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಭಿಕ್ಷಾಟನೆ ತಡೆಗಟ್ಟಲು ಕಠಿಣ ಕ್ರಮ ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು. ಅದರ ಬೆನ್ನಲ್ಲೇ ಸಂಬಂಧಿಸಿದ ಇಲಾಖೆ ಸಚಿವರೊಂದಿಗೆ ಚರ್ಚಿಸಲು ಮಹತ್ವದ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

ಭಿಕ್ಷಾಟನೆ ಹೆಸರಿನಲ್ಲಿ ಹಸುಗೂಸುಗಳನ್ನು ಬಾಡಿಗೆ ಪಡೆದು, ಮಾತ್ರೆ ನೀಡಿ ವಾಹನ ದಟ್ಟಣೆ ಪ್ರದೇಶಗಳಲ್ಲಿ ಭಿಕ್ಷಾಟನೆ ಮಾಡುವುದೂ ಸೇರಿದಂತೆ ವಿವಿಧ ಅಕ್ರಮಗಳನ್ನು ಗುರುತಿಸಿದ್ದು, ಇದರ ಸಂಪೂರ್ಣ ತಡೆಗಟ್ಟಲು ಕಠಿಣಕ್ರಮ ವಹಿಸುವ ಬಗ್ಗೆ ಹಾಗೂ ಭಿಕ್ಷಾಟನೆ ತಡೆಗಟ್ಟುವ ಸಂಬಂಧ ರೂಪುರೇಷೆಗಳ ಬಗ್ಗೆ  ಈ ಸಭೆಯಲ್ಲಿ ಸ್ಪಷ್ಟ ತೀರ್ಮಾನಗಳನ್ನು ಕೈಗೊಳ್ಳಲಿದೆ.

ಇದನ್ನೂ ಓದಿ... ಬೆಂಗಳೂರು | ಭಿಕ್ಷುಕರಿಗೆ ಬಿಸಿ ಮುಟ್ಟಿಸಿದ ಸಿಸಿಬಿ: 43 ಭಿಕ್ಷುಕರ ಬಂಧನ, 28 ಮಕ್ಕಳ ರಕ್ಷಣೆ

ಅಲ್ಲದೆ, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆಗಳ ವ್ಯಾಪ್ತಿಯಲ್ಲಿ ಭಿಕ್ಷಾಟನೆ ನಿರ್ಮೂಲನೆ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಅವರಿಗೆ ಪುನರ್ವಸತಿ ವಿಷಯಗಳು, ರಾಜ್ಯದ 31 ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಮಪರ್ಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಮಹತ್ವ ತೀರ್ಮಾನಗಳನ್ನು ಸಭೆ ಕೈಗೊಳ್ಳಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News