ಚಾಮರಾಜನಗರ: ಗ್ರಾಮಕ್ಕೆ ಲಗ್ಗೆ ಇಟ್ಟ ಕಾಡಾನೆಗಳ ಸೆರೆಗೆ 'ಆಪರೇಷನ್ ಎಲಿಫೆಂಟ್'

Update: 2022-07-17 17:31 GMT

ಚಾಮರಾಜನಗರ: ಗ್ರಾಮಕ್ಕೆ ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿದ್ದ ಎರಡು ಪುಂಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ  ಬೆಟ್ಟದ ತಪ್ಪಲಿನ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ನಡೆಯುತ್ತಿದೆ.

ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿಧಾಮದ ಡಿಎಫ್ಒ ಏಡುಕುಂಡಲು ನೇತೃತ್ವದಲ್ಲಿ ಎರಡು ಸಾಕಾನೆಗಳ ಮೂಲಕ ಪುಂಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಒಂದು ಆನೆಯನ್ನು ಗುರುತಿಸಿ ಅದನ್ನು ಸೆರೆ ಹಿಡಿಯುವ ಕಾರ್ಯ ನಡೆಯುತ್ತಿದೆ.  ರವಿವಾರ ಸಂಜೆ ವೇಳೆಗೆ, ಅರವಳಿಕೆ ಮದ್ದು ಕೊಟ್ಟು ಆನೆಗೆ ರೇಡಿಯೋ ಕಾಲರ್ ಅಳವಡಿಸಿ, ಜಿಪಿಎಸ್ ಮೂಲಕ ಆನೆ ಗ್ರಾಮದ ಸರಹದ್ದಿಗೆ ಬಂದಾಗ ಮತ್ತೆ ಅದನ್ನು ಕಾಡಿಗಟ್ಟುವ ಯೋಜನೆಯನ್ನು ಅರಣ್ಯ ಇಲಾಖೆ ರೂಪಿಸಿದೆ.

ಪೊನ್ನಾಚಿ ಗ್ರಾಮದಲ್ಲಿ ಈ ಎರಡು ಪುಂಡಾನೆಗಳ ಆಟಾಟೋಪಕ್ಕೆ ಗ್ರಾಮಸ್ಥರು ರೋಸಿ ಹೋಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್  ಪರಿಹಾರ ಕೈಗೊಳ್ಳಲು ಅರಣ್ಯ ಅಧಿಕಾರಿಗಳಿಗೆ ಸೂಚಿಸಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಹಿನ್ನೆಲೆಯಲ್ಲಿ ರೇಡಿಯೋ ಕಾಲರ್ ಅಳವಡಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧರಿಸಲಾಗಿದೆ.

 ಆಪರೇಷನ್ ಎಲಿಫ್ಯಾಂಟ್ ಕಾರ್ಯಾಚರಣೆ ರವಿವಾರ ನಡೆಯುತ್ತಿದ್ದು, ನಾಳೆಯೂ ನಡೆಯುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News