ಆ.28ಕ್ಕೆ ರಾಜ್ಯಾದ್ಯಂತ ಏಕಕಾಲದಲ್ಲಿ 5ಲಕ್ಷ ಜನರಿಂದ ಯೋಗ

Update: 2022-07-17 18:46 GMT

ಬೆಂಗಳೂರು, ಜು.17: ಕ್ರೀಡಾ ದಿನಾಚರಣೆ ಅಂಗವಾಗಿ ಇದೇ ಮೊದಲ ಬಾರಿಗೆ 5 ಲಕ್ಷ ಜನರು ಸೇರಿ ಆಗಸ್ಟ್ 28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲಕ್ಕೆ ‘ಯೋಗಥಾನ್’ ನಡೆಸಲಿದ್ದು, ಗಿನ್ನೀಸ್ ದಾಖಲೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಹೇಳಿದ್ದಾರೆ. 

ರವಿವಾರ ನಗರದ ಶ್ರೀಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ನೆಹರು ಯುವ ಕೇಂದ್ರ ಸಂಘಟನ್, ಆಯುಷ್ ಇಲಾಖೆ, ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಆಯುಷ್ ಟಿ.ವಿ ಪ್ರೈ.ಲಿ. ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಯೋಗಥಾನ್-2022 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯೋಗಕ್ಕೆ ಕ್ರೀಡೆಯ ಮಾನ್ಯತೆ ನೀಡಿ ಇದೇ ಮೊದಲ ಬಾರಿಗೆ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿ ಸೇರಿಸಲಾಗಿದೆ. ಯೋಗಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡೋಣ ಎಂದು ಹೇಳಿದರು.

ಈ ಯೋಗಥಾನ್‍ಗೆ ಖ್ಯಾತ ಚಲನಚಿತ್ರ ನಟ ರಮೇಶ ಅರವಿಂದ್ ಅವರು ಬ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ನಮ್ಮ ಸರಕಾರದ ಈ ಪ್ರಯತ್ನಕ್ಕೆ ವ್ಯಾಪಕ ಪ್ರೋತ್ಸಾಹ ಸಿಗುತ್ತಿದ್ದು, ಎಲ್ಲ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್,ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಮಿರಾಕಲ್ ಡ್ರೀಂಕ್ಸ್ ಎಸ್.ಎಂ.ರಾಜು, ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ಡಾ.ಎಂ.ನಿರಂಜನ ಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News