ಕನ್ನಡ ಶಾಲೆಗಳ ಅಭಿವೃದ್ಧಿಗೆ 25 ಲಕ್ಷ ರೂ. ದೇಣಿಗೆ ನೀಡಿದ ಶಾಹಿನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್
ಕಲಬುರಗಿ, ಜು.18: ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ಸಮಗ್ರ ಅಭಿವೃದ್ಧಿಗಾಗಿ ಬೀದರಿನ ಪ್ರತಿಷ್ಠಿತ ಶಾಹಿನ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು 25 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಇಲ್ಲಿನ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಸಂಚಾಲಿತ, ವಿಕಾಸ ಅಕಾಡಮಿ ಮತ್ತು ಶಾಹಿನ್ ಶಿಕ್ಷಣ ಸಂಸ್ಥೆ ವತಿಯಿಂದ ರವಿವಾರ ಜರುಗಿದ ಕರ್ನಾಟಕ ಅನುದಾನರಹಿತ ಕನ್ನಡ ಶಾಲೆಗಳ ಸಮಾವೇಶದಲ್ಲಿ ಅವರು ದೇಣಿಗೆಯ ಚೆಕ್ ಹಸ್ತಾಂತರಿಸಿದರು.
ಸಮಾರಂಭದಲ್ಲಿ ಮಾತನಾಡಿದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಮ್, ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ, ಪ್ರೋತ್ಸಾಹಿಸುವ ಕಾರ್ಯ ಆಗಬೇಕು. ಅನುದಾನರಹಿತ ಶಾಲೆಗಳ ಉಳಿವಿಗಾಗಿ ಸರಕಾರದ ನೆರವಿನ ಜೊತೆಗೆ ಶಾಹಿನ್ ಸಂಸ್ಥೆ 25 ಲಕ್ಷ ರೂ. ದೇಣಿಗೆ ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಹಿನ್ ಸಂಸ್ಥೆಯ ಮುಖ್ಯಸ್ಥ ಡಾ.ಅಬ್ದುಲ್ ಖದೀರ್, ವಿಕಾಸ್ ಅಕಾಡಮಿಯಿಂದ ಕನ್ನಡ ಶಾಲೆಗಳ ಉಳಿವಿಗಾಗಿ ಏನೇ ಮಾಡಿದರೂ ಸಹಕರಿಸಲಾಗುವುದು. ಕನ್ನಡ ಶಾಲೆಗಳ ಉಳಿವಿಗೆ ಆದ್ಯತೆ ನೀಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಮಾತನಾಡಿ, ಕನ್ನಡ ಅನ್ನದ ಭಾಷೆಯಾಗಬೇಕು. ಕನ್ನಡ ಉಳಿಯಬೇಕು. ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡಿಸಿದೆ ಎಂದು ಹೇಳಿದರು.
ಕನ್ನಡ ನೇಮಕ ಪ್ರಾಧಿಕಾರಗಳಲ್ಲಿ ಕನ್ನಡ ಕಡ್ಡಾಯವಾಗಿ ಬಳಸಬೇಕು. ವೃತ್ತಿ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು. ಅಧೀನ ನ್ಯಾಯಾಲಯದಲ್ಲೂ ಕನ್ನಡ ಕಡ್ಡಾಯವಾಗಬೇಕು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಈ ಕಾರ್ಯಕ್ಕೆ ಎಲ್ಲ ಶಾಸಕರು ಸಹಕರಿಸಬೇಕು ಎಂದು ಹೇಳಿದರು.
ಎಸ್.ಎಸ್ ಖಾದ್ರಿ, ಎಚ್.ಸಿ ಪಾಟೀಲ್, ಸಿದ್ಧಣ್ಣಗೌಡ ಕಾಡಮನೂರು, ವಿಜಯ ಕುಮಾರ್ ತೇಗಲಗುಪ್ಪಿ, ಸುರೇಶ ಚೆನ್ನಚೆಟ್ಟಿ, ನಿಷ್ಠಿ ರುದ್ರಪ್ಪ, ರಂಗಣ್ಣ ಪಾಟೀಲ್, ಯಶವಂತರಾಯ ಅಷ್ಟಗಿ, ಶಿವರಾಜ್ ಅಡಂಗಿ ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು