×
Ad

ಪ್ರಾಣಭೀತಿಯಲ್ಲೇ ಸಂಚರಿಸುತ್ತಿರುವ ಕರಡಿಗ-ಬೆಳಕೋಡು ಗ್ರಾಮಸ್ಥರು

Update: 2022-07-18 13:35 IST

ರಿಪ್ಪನ್‌ ಪೇಟೆ, ಜು.18: ರಾಜ್ಯದ ಗೃಹ ಸಚಿವ ಹಾಗೂ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆದ ಆರಗ ಜ್ಞಾನೇಂದ್ರ ಅವರ ಕ್ಷೇತ್ರದ ಹೆದ್ದಾರಿಪುರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೆಳಕೋಡು-ಕರಡಿಗ ಗ್ರಾಮದ ಸಂಪರ್ಕವೂ ಅಪಾಯವನ್ನು ಆಹ್ವಾನಿಸುತ್ತಿದ್ದು, ಪ್ರತಿನಿತ್ಯ ನೂರಾರು ಜನ ಇಲ್ಲಿನ ಅಸುರಕ್ಷಿತ ಕಾಲುಸಂಕ ಬಳಸಿ ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಾಗಿ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಕಿರುಸೇತುವೆಯನ್ನು ನಿರ್ಮಿಸಿಕೊಡಬೇಕೆಂಬುವುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರತಿವರ್ಷದ ಮಳೆಗಾಲದಲ್ಲಿ ಗ್ರಾಮದ ಜನರು ನಿತ್ಯ ಸಂಚಾರದ ಮಾರ್ಗ ಹಳ್ಳದ ಹರಿವಿನಿಂದ ಕಡಿತಗೊಂಡು ಸುತ್ತಿಬಳಸಿ ದೂರದ ಪ್ರಯಾಣದಿಂದ ಜನರು, ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಪಟ್ಟಣ ಸೇರಬೇಕಾಗಿದೆ.

ನೇರ ಸಂಪರ್ಕದ ದಾರಿ ನೀರಿನಿಂದ ಮುಳುಗಡೆ ಗೊಂಡು ಸಂಚಾರ ನಿರ್ಬಂಧಿತ ವಾಗುವುದರಿಂದ ಇಲ್ಲಿನ ಜನರು ಪಟ್ಟಣ ಸಮೀಪ ಸಂಚಾರಕ್ಕಾಗಿ ಶರ್ಮಿನ್ಯಾವತಿ ಹೊಳೆಯ ಎರಡು ಕಡೆಯಲ್ಲಿರುವ ದಂಡೆಗೆ ಮರದ ಉದ್ದದ ಮರದ ದಿಮ್ಮಿಗಳನ್ನು ಬಳಸಿ ಏಕವ್ಯಕ್ತಿ ದಾಟುವ ಕಾಲಸಂಕವನ್ನು ನಿರ್ಮಿಸಿಕೊಂಡಿದ್ದಾರೆ. ಆದರೆ, ಇಲ್ಲಿನ ಸಂಚಾರ ಬಹಳ ದುಸ್ತರವಾಗಿದ್ದು, ವಯೋವೃದ್ಧರು ಗರ್ಭಿಣಿಯರು ಮಹಿಳೆಯರು, ವಿದ್ಯಾರ್ಥಿಗಳು ಸಂಘ ದಾಟುವಾಗ ಸ್ವಲ್ಪ ಅಜಾಗ್ರತೆ ವಹಿಸಿದರೂ ನೀರು ಪಾಲಾಗುವ ಅಪಾಯ ಎದುರಾಗಿದೆ. ಆದರೂ ಅನಿವಾರ್ಯವಾಗಿ ಇದೇ ಕಾಲುಸಂಕವನ್ನು ಬಳಸಬೇಕಾಗಿದೆ. ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಮ್ಮ ಗೋಳು ಕೇಳುವವರಿಲ್ಲ ಎಂದು ಗ್ರಾಮಸ್ಥರು ತಮ್ಮ ಅಸಹಾಯಕತೆಯನ್ನು 'ವಾರ್ತಾಭಾರತಿ'ಯೊಂದಿಗೆ ಹಂಚಿಕೊಂಡಿದ್ದಾರೆ.

ಈ ಗ್ರಾಮದ ಜನರು ಕೃಷಿ ಮತ್ತು ಹೈನುಗಾರಿಕೆಯನ್ನು ನೆಚ್ಚಿಕೊಂಡಿದ್ದು, ಜೀವನ ನಡೆಸುತ್ತಿದ್ದಾರೆ. ಸುಮಾರು 100ಕ್ಕೂ ಅಧಿಕ ಕುಟುಂಬಗಳಿರುವ ಇಲ್ಲಿನ ಜನರು, ಮಕ್ಕಳು ಶಾಲೆ, ಆಸ್ಪತ್ರೆ, ಸಂತೆ ಸೇರಿದಂತೆ ಇನ್ನಿತರ ದೈನಂದಿನ ಕಾರ್ಯಗಳಿಗೆ ಪಟ್ಟಣಕ್ಕೆ ಬರಲು ಗ್ರಾಮಗಳ ಸಮೀಪದ ಅಸುರಕ್ಷಿತ ಕಾಲುಸಂಕವನ್ನು ಬಳಸಬೇಕಿದೆ. ಸರಕು-ಸರಂಜಾಮುಗಳನ್ನು ವಾಹನಗಳಲ್ಲಿ ಸಾಗಿಸಲು 10 ಕಿ.ಮೀ. ದೂರದ ಕಣಬಂದೂರು ಮಾರ್ಗದಲ್ಲಿ ಸುತ್ತಾಡಿಕೊಂಡು ಹೋಗಬೇಕಿದೆ. ಸಣ್ಣಪುಟ್ಟ ಮಕ್ಕಳನ್ನು ಅಂಗನವಾಡಿಗಳಿಗೆ ಹಾಗೂ ಪ್ರಾಥಮಿಕ ಶಾಲೆಗಳಿಗೆ ಕಳುಹಿಸುವುದೂ ಹರಸಾಹಸವಾಗಿದೆ.

ಕಳೆದ 10 ವರ್ಷದ ಹಿಂದೆ ಚಿತ್ತಚೇನಿ ಬಳಿಯಲ್ಲಿ ಕಾಲುಸಂಕ ದಾಟುವಾಗ ಎರಡು ಮಕ್ಕಳು ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು, ಕಳೆದ ವರ್ಷದಲ್ಲಿಯೂ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಇಂತಹ ದುರ್ಘಟನೆಗಳು ಸಂಭವಿಸಿದೆ. ಆದರೂ, ಕ್ಷೇತ್ರದ ಶಾಸಕ, ಹಾಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಬಗ್ಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಬೆಳಕೋಡು-ಕರಡಿಗ ಗ್ರಾಮಕ್ಕೆ ಕಿರುಸೇತುವೆ ನಿರ್ಮಾಣ ಮಾಡುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಸಲ್ಲಿಸಿದ್ದು, ಸಚಿವರು ಕೇವಲ ಭರವಸೆ ನೀಡಿದ್ದಾರೆಯೇ ಹೊರತು ಅನುಷ್ಠಾನಗೊಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಮ್ಮೂರಿನ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡುವಂತೆ ಸಚಿವರು, ಸಂಸದರಿಗೆ ಮನವಿ ಸಲ್ಲಿಸಿದ್ದೇವೆ. ಸಚಿವರು ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿನ ಜನರಿಗೆ ಅತೀ ಅಗತ್ಯವಾಗಿರುವ ಕಿರುಸೇತುವೆ ಕಾಮಗಾರಿಯನ್ನು ಶೀಘ್ರವೇ ಆರಂಭಿಸುವಂತೆ ಪ್ರಯತ್ನಿಸಲಾಗುವುದು.

 ಲಲಿತಾ, ಹೆದ್ದಾರಿಪುರ ಗ್ರಾಪಂ ಉಪಾಧ್ಯಕ್ಷೆ

--------------------------------------------'

ಜಂಬಳ್ಳಿ-ಯಡಗುಡ್ಡೆ, ಸಂಪಳ್ಳಿ,  ಕಾರಗೋಡು, ಬೆಳಕೋಡು, ಕರಡಿಗ ಗ್ರಾಮಗಳ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಈ ಕ್ಷೇತ್ರದ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.

ಈ ರಾಮಪ್ಪ, ಕರಡಿಗ ಗ್ರಾಮದ ರೈತ

Writer - ರಫಿ ರಿಪ್ಪನ್ ಪೇಟೆ

contributor

Editor - ರಫಿ ರಿಪ್ಪನ್ ಪೇಟೆ

contributor

Similar News