ತುಮಕೂರು | 48 ಗಂಟೆಗಳ ಸತತ ಕಾರ್ಯಾಚರಣೆ; ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಪತ್ತೆ

Update: 2022-07-18 12:12 GMT

ತುಮಕೂರು.ಜು.18: ಸತತ 48 ಗಂಟೆಗಳ ಕಾರ್ಯಾಚರಣೆಯ ನಂತರ ಶನಿವಾರ ಮಧ್ಯಾಹ್ನ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕ ಅಮ್ಜಾದ್‍ಖಾನ್ ಶವ ಪತ್ತೆ ಹೆಚ್ಚುವಲ್ಲಿ ಜಿಲ್ಲಾಡಳಿತ ಯಶಸ್ಸು ಕಂಡಿದ್ದು,ಕೊನೆಗೆ ಎನ್.ಡಿ.ಅರ್.ಎಫ್,ನಗರಪಾಲಿಕೆ,ಕೆಲ ಸ್ವಯಂ ಸೇವಕ ತಂಡಗಳು ಸುರಿಯುತ್ತಿರುವ ಮಳೆಯ ನಡುವೆಯೂ ನಡೆಸಿದ ನಿರಂತರ ಪ್ರಯತ್ನ ಯಶಸ್ಸು ಕಂಡಿದೆ.

ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಗರದ ರಿಂಗ್ ರಸ್ತೆಯ ಧ್ಹಾನಪ್ಯಾಲೇಸ್ ರೈಲ್ವೆ ಕೆಳಸೇತುವೆ ಬಳಿ ಆಟೋ ಚಾಲಕ ಶಾಂತಿ ನಗರದ ಅಮ್ಜದ್ ಖಾನ್ (43), ಆಟೋದಲ್ಲಿ ತೆರಳುವ ವೇಳೆ ಮಳೆ ನೀರಿನಿಂದ ಆಟೋ ಕೆಟ್ಟ ಪರಿಣಾಮ ಆಟೋ ರಿಕ್ಷಾವನ್ನು ದಡಕ್ಕೆ ನಿಲ್ಲಿಸಿ, ಮಳೆ ನೀರು ಹರಿಯುತ್ತಿರುವುದನ್ನು ನೋಡುತ್ತಿದ್ದಾಗ ಒಂದೇ ಬಾರಿಗೆ ಬಹಳ ರಭಸದಿಂದ ಬಂದ ಮಳೆ ನೀರಿಗೆ ಎದುರು ನಿಲ್ಲಲಾರದ ಕೊಚ್ಚಿ ಹೊಗಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಪಾಲಿಕೆಯ ಸಿಬ್ಬಂದಿಗಳು,ಆಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸಮಾಜಸೇವಕ ಇಕ್ಬಾಲ್ ಅಹಮದ್ ನೇತೃತ್ವದ ಸ್ವಯಂ ಸೇವಕರ ತಂಡ ರಾತ್ರಿ 7 ಗಂಟೆಯವರೆಗೂ ರಾಜಗಾಲುವೆಯಲ್ಲಿ ತಡಕಾಡಿದರೂ ಮೃತದೇಹ ಪತ್ತೆಯಾಗಿರಲಿಲ್ಲ. ಮೃತದೇಹ ಪತ್ತೆಗಾಗಿ ಬೆಂಗಳೂರಿನಿಂದ ಎನ್‍ಡಿಆರ್‍ಎಫ್ ತಂಡವೂ ಸಹ ಪ್ರಯತ್ನ ನಡೆಸಿತ್ತು. ಸ್ಥಳಕ್ಕೆ ಜಿಲ್ಲಾಧಿಕಾರಿಗಳು,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು,ಪಾಲಿಕೆಯ ಆಯುಕ್ತರು,ತುಮಕೂರು ಉಪವಿಭಾಗಾ ಧಿಕಾರಿ ಅಜಯ್ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಭೇಟಿ ನೀಡಿ,ಭಾನುವಾರ ಇಡೀ ದಿನ ಮೂರು ತಂಡಗಳಾಗಿ ರೈಲ್ವೆಲೈನ್ ಪಕ್ಕದ ರಾಜಗಾಲುವೆ,ಕೆರೆಯ ಪಕ್ಕದ ಜಮೀನುಗಳು ಹಾಗೂ ಇನ್ನಿತರ ಕಡೆಗಳಲ್ಲಿ ಮೃತದೇಹ ಕ್ಕಾಗಿ ಹುಡುಕಾಣ ನಡೆಸಿದ್ದರು.

ಸಹಾಯಕ್ಕಾಗಿ ಡ್ರೋನ್ ಕ್ಯಾಮರ,ಬೋಟ್ ಸಹ ಬಳಕೆ ಮಾಡಲಾಗಿತ್ತು.ರವಿವಾರ ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವ ಅರಗಜ್ಞಾನೇಂದ್ರ ಸಹ ಭೇಟಿ ನೀಡಿ,ಸ್ಥಳಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಕಾರ್ಯಾಚರಣೆಯ ಮಾಹಿತಿ ಪಡೆದು,ಶವ ಸಿಗುವವರೆಗೂ ಕಾರ್ಯಾಚರಣೆ ಮುಂದುವರಿಸುವಂತೆ ಸಲಹೆ ನೀಡಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಸಲಹೆಯಂತೆ ಸೋಮವಾರ ಬೆಳಗ್ಗೆ ಶವ ಹುಡುಕಾಟ ಆರಂಭಿಸಿದ ತಂಡ ಗಳಿಗೆ ಯಾವುದೇ ಫಲ ಸಿಕ್ಕಿರಲಿಲ್ಲ.ಆದರೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ತುಮಕೂರು ನಗರದ ಕೊಳಚೆ ನೀರು ಸಂಸ್ಕರಣ ಘಟಕ ಇರುವ ಭೀಮಸಂದ್ರ ಕೆರೆಯ ಕೊನೆಯ ಭಾಗದಲ್ಲಿ ಶವ ಪತ್ತೆಯಾಗಿದೆ.ಇಟಾಚಿಯ ಮೂಲಕ ಮೃತದೇಹವನ್ನು ಹೊರತೆಗೆ ದಿದ್ದು,ಶವ ಸಿಕ್ಕ ಹಿನ್ನೇಲೆಯಲ್ಲಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸಿಬ್ಬಂದಿಗಳು, ಸ್ವಯಂ ಸೇವಕರು, ಜಿಲ್ಲಾಡಳಿತದ ಅಧಿಕಾರಿಗಳು, ಸಾರ್ವಜನಿಕರು ನಿಟ್ಟೂಸಿರು ಬಿಟ್ಟಿದ್ದಾರೆ.

ಸೂಕ್ತ ಪರಿಹಾರಕ್ಕೆ ಒತ್ತಾಯ; ಆಟೋ ಚಾಲಕ ಶವ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಶಾಸಕ ಜ್ಯೋತಿಗಣೇಶ್ ಕುಟುಂಬದವರಿಗೆ ಸಾಂತ್ವನ ಹೇಳಿದರು.ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಆಟೋ ಚಾಲಕನ ಮೃತದೇಹ ಎನ್‍ಡಿಆರ್‍ಎಫ್ ತಂಡ,ಅಗ್ನಿಶಾಮಕ ದಳ ಸಿಬ್ಬಂದಿಯ ಸತತ ಕಾರ್ಯಾಚರಣೆಯಿಂದಾಗಿ ಪತ್ತೆಯಾಗಿದೆ. ಆಟೋ ಚಾಲಕ ಕೊಚ್ಚಿ ಹೋಗಿದ್ದ ಸ್ಥಳದಿಂದ ಸುಮಾರು 1.05 ಕಿ.ಮೀ. ದೂರದಲ್ಲಿ ಶವ ಪತ್ತೆಯಾಗಿದೆ.ಮೃತ ವ್ಯಕ್ತಿಯ ಕುಟುಂಬಕ್ಕೆ ಸರಕಾರದಿಂದ 5 ಲಕ್ಷ ರೂ. ಪರಿಹಾರ, ಪಾಲಿಕೆ ವತಿಯಿಂದ 50 ಸಾವಿರ ರೂ. ನೀಡಲಾಗುವುದು. ಜತೆಗೆ ಆ ಕುಟುಂಬಕ್ಕೆ ಮನೆ ಸೇರಿದಂತೆ ಇತರೆ ಸೌಲಭ್ಯ ಹಾಗೂ ಸಾಮಾಜಿಕ ಭದ್ರತೆ ಒದಗಿಸುವ ಕೆಲಸವನ್ನು ಸಹ ಮಾಡಲಾಗುವುದು ಎಂದು ಹೇಳಿದರು.

ಮಾಜಿ ಶಾಸಕ ಡಾ. ರಫೀಕ್‍ ಅಹ್ಮದ್ ಮಾತನಾಡಿ, ಮೃತ ಆಟೋ ಚಾಲಕನ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು ಹಾಗೂ ಈ ಕುಟುಂಬದ ಯಾರಾದರೂ ಒಬ್ಬರಿಗೆ ಸರಕಾರಿ ನೌಕರಿ ಕೊಡಬೇಕು.ಜಿಲ್ಲಾಡಳಿತ, ಎನ್‍ಡಿಆರ್‍ಎಫ್ ತಂಡ ಹಾಗೂ ಮಹಾನಗರ ಪಾಲಿಕೆಯ ಸತತ ಶ್ರಮದ ಕಾರ್ಯದಿಂದಾಗಿ ಮೃತದೇಹ ಪತ್ತೆಯಾಗಿದೆ ಎಂದರು.

ಮುಖಂಡ ಇಕ್ವಾಸ್ ಅಹಮದ್ ಮಾತನಾಡಿ, ಮೃತ ಆಟೋ ಚಾಲಕ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. ಈಗ ಆ ಕುಟುಂಬ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿದೆ. ಸರಕಾರ ಈ ಕುಟುಂಬದವರಿಗೆ ಹೆಚ್ಚಿನ ಪರಿಹಾರ ಕಲ್ಪಿಸುವ ಜತೆಗೆ ಸಾಮಾಜಿಕ ಭದ್ರತೆ ಒದಗಿಸಬೇಕು.ನಗರದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದರು.

ಮಹಾನಗರ ಪಾಲಿಕೆ ಸದಸ್ಯ ಹೆಚ್.ಡಿ.ಮಂಜುನಾಥ್ ಮಾತನಾಡಿ,ಮೃತ ಆಟೋ ಚಾಲಕ ನನ್ನ ವ್ಯಾಪ್ತಿಯ ವಾರ್ಡ್ ನವರಾಗಿದ್ದು,ಸ್ವಂತ ಸೂರು ಸಹ ಹೊಂದಿಲ್ಲ.ಬಾಡಿಗೆ ಆಟೋ ಪಡೆದು ಜೀವನ ಸಾಗಿಸುತ್ತಿದ್ದರು.ದುರಾದೃಷ್ಟವ ಶಾತ್ ಇಂದು ಆ ಕುಟುಂಬಕ್ಕೆ ಆಧಾರ ಇಲ್ಲದಂತಾಗಿದೆ.ಇದನ್ನು ಮನಗಂಡು ಜಿಲ್ಲಾಡಳಿತ ಹಾಗೂ ಸರಕಾರ ಈ ಕುಟುಂಬದ ವರಿಗೆ 20 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News