ದೇವನೂರು ಬಗ್ಗೆ ಮಾತನಾಡುವ ಕನಿಷ್ಠ ಯೋಗ್ಯತೆಯೂ ಇಲ್ಲ: ಪ್ರತಾಪ್ ಸಿಂಹ ವಿರುದ್ಧ ದಸಂಸ ಕಿಡಿ

Update: 2022-07-18 13:49 GMT
ಪ್ರತಾಪ್ ಸಿಂಹ

ಮೈಸೂರು : ಅಧಿಕಾರದ ದುರಾಸೆಗಾಗಿ ತನ್ನ ಲೇಖನಿಯನ್ನೇ ಆರೆಸ್ಸೆಸ್ ಗೆ ಅಡವಿಟ್ಟಿರುವ ಪ್ರತಾಪ್ ಸಿಂಹ, ಅಧಿಕಾರದಿಂದ ಸದಾ ದೂರವಿರುವ ದೇವನೂರು ಬಗ್ಗೆ ಮಾತನಾಡುವ ಕನಿಷ್ಠ ಯೋಗ್ಯತೆಯೂ ಇಲ್ಲ ಎಂದು ದಸಂಸ ರಾಜ್ಯ ಸಂಚಾಲಕರು ಗುರುಪ್ರಸಾದ್ ಕೆರಗೋಡು ಗುಡುಗಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ಆರೆಸ್ಸೆಸ್ ಕೊಳಕನ್ನೆಲ್ಲಾ ಮುಚ್ಚಿಕೊಳ್ಳಲು ದೇವನೂರರಂತಹ ಸರಳ ಸಜ್ಜನ ಸಾಹಿತಿಯನ್ನು ‘ಆಳು’ ಎಂದು ಕರೆಯುವ ಮೂಲಕ ಮತ್ತೆ ನಿಮ್ಮ `ಮಾಲೀಕ’ ಹಾಗೂ `ಜಾತಿ ಶ್ರೇಷ್ಟತೆ’ ಯನ್ನು ಪ್ರದರ್ಶಿಸಿದ್ದೀರಿ. ಬಾಯಿಗೆ ಬಂದಂತೆ ಮಾತನಾಡಿದರೆ ನಿಮ್ಮ ಮನೆ ಮುಂದೆ ನಿಮ್ಮ ರೀತಿಯಲ್ಲೇ ಉತ್ತರಿಸುತ್ತೇವೆ ಹುಷಾರ್' ಎಂದು ಎಚ್ಚರಿಕೆ ನೀಡಿದರು. 

'ಆರೆಸ್ಸೆಸ್ ಜನರನ್ನು ಹೊಡೆದಾಡಿಸಿ ಅಧಿಕಾರ ಹಿಡಿಯುವ ಷಡ್ಯಂತ್ರಕಾರಿ ಸಂಘಟನೆ ಎಂಬ ನಿಜವನ್ನು ದೇವನೂರರು ತಮ್ಮ ಕೃತಿಯಲ್ಲಿ ವಿಷದೀಕರಿಸಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ ಎಂಬಂತೆ ಚಾತುರ್ವರ್ಣದ ಸಮರ್ಥನೆಗೆ ಧುಂ ಎಂದು ಸಂಸದರು ಧಾವಿಸಿದ್ದಾರೆ' ಎಂದು ವ್ಯಂಗ್ಯವಾಡಿದರು.

'ಬೇರೆ ಧರ್ಮಗಳಲ್ಲೂ ಪಂಗಡಗಳಿವೆ, ವೃತ್ತಿ ಆಧಾರಿತ ಆ ವಿಭಜನೆಯನ್ನು ಎಂದೋ ದಾಟಿ ಬಂದಿದ್ದೇವೆ ಎಂದು ಚಾತುರ್ವರ್ಣ ಸಮರ್ಥನೆಗೆ ಪರದಾಡುವುದು ನೋಡಿ ನಗು ರ‍್ತಿದೆ. ನಮ್ಮದು ಸನಾತನ ಧರ್ಮ, ಭಾರತೀಯ ಸಂಸ್ಕೃತಿ, ಭವ್ಯ ಪರಂಪರೆ, ಗುರುಕುಲ ಪದ್ಧತಿ ಎಂದೆಲ್ಲಾ ಬಡಬಡಿಸುವ ನಿಮ್ಮ ಗ್ಯಾಂಗ್ ಹೀಗೆ ಹೇಳಿದಾಗಲೆಲ್ಲಾ ನಮಗೆ ನೆನಪಾಗುವುದು ಉಚ್ಛ-ನೀಚ, ಶ್ರೇಷ್ಠ-ಕನಿಷ್ಠ ಎಂಬ ವಿಂಗಡನೆ, ಶ್ರೀರಾಮ ಶೂದ್ರ ಶಂಬೂಕ ತಪಸ್ವಿಯ ತಲೆ ಕತ್ತರಿಸಿದ ಪ್ರಸಂಗ, ಗುರು ಕಾಣಿಕೆಯ ನೆಪದಲ್ಲಿ ಏಕಲವ್ಯನ ಹೆಬ್ಬೆರಳ ಬಲಿ ಪಡೆದ ದ್ರೋಣಾಚಾರ್ಯರ ಕುತಂತ್ರ, ಜಾತೀಯತೆ, ಅಸ್ಪೃಶ್ಯತೆ, ಸತಿ ಸಹಗಮನ ಪದ್ಧತಿ, ದಲಿತ-ಹಿಂದುಳಿದ ಸಮುದಾಯದ ಮಹಿಳೆಯರ ದೇವದಾಸಿ ಪದ್ಧತಿ, ಬೆತ್ತಲೆಸೇವೆ, ಉರುಳು ಸೇವೆ, ಅಜಲು ಪದ್ಧತಿ ಮುಂತಾದ ಅನಿಷ್ಟ ಪದ್ಧತಿಗಳೇ ನಮಗೆ ನೆನಪಾಗುತ್ತದೆ 'ಎಂದು ವಾಗ್ದಾಳಿ ನಡೆಸಿದರು.

'ವಿವೇಕರಹಿತವಾದ ವ್ಯಂಗ್ಯ ಧ್ರಾಷ್ಟತನದ ಹಾಗೂ ದುರಹಂಕಾರದ ಮಾತುಗಳನ್ನಾಡಬೇಡಿ. ಪಂಗಡಗಳು, ಒಳಪಂಗಡಗಳು, ಅವುಗಳ ನಡುವೆ ಪೈಪೋಟಿ ಎಂಬುದು ಎಲ್ಲಾ ಧರ್ಮ ಮತ್ತು ಜಾತಿಗಳಲ್ಲಿ ಇದೆ. ಆದರೆ ಬ್ರಾಹ್ಮಣರು ಮಾತ್ರ ಶ್ರೇಷ್ಟರು, ಪೂಜನೀಯರು, ಶೂದ್ರರು ನಿಮ್ಮ ಚಾಕರಿ ಮಾಡಲಿಕ್ಕೇ ಹುಟ್ಟಿರುವವರು, ಅಸ್ಪೃಶ್ಯರು ಊರಿನ ಜನರ ಜೊತೆ ಬದುಕಲಿಕ್ಕೇ ಅನರ್ಹರು ಅವರು ವಿದ್ಯೆ, ಸಂಪತ್ತು, ಆಸ್ತಿ ಹೊಂದಬಾರದು ಎಂಬಂತಹ ಹೇಯ ನೀತಿ ಜಗತ್ತಿನ ಯಾವ ಧರ್ಮದಲ್ಲೂ ಇಲ್ಲ. ಇದೇ ಚಾತುರ್ವರ್ಣ ಹಿಂದುತ್ವ. ಇದನ್ನೆ ಬುದ್ಧ, ಮಹಾವೀರ, ಬಸವಣ್ಣ, ವಿವೇಕಾನಂದ, ನಾರಾಯಣ ಗುರು ಮುಂತಾದ ಎಲ್ಲಾ ಸಂತರು ಮತ್ತು ಫುಲೆ, ಅಂಬೇಡ್ಕರರಂತಹ ಸಮಾಜ ಸುಧಾರಕರು ಖಂಡಾತುಂಡವಾಗಿ ವಿರೋಧಿಸಿದ್ದು. ಅವರನ್ನೆಲ್ಲಾ ನೀವು ನಿಂದಿಸಿದ್ದೀರಿ, ಕಾಡಿದ್ದೀರಿ, ಸಹಸ್ರಾರು ಶರಣರನ್ನು ಕೊಂದೇಬಿಟ್ಟಿದ್ದೀರಿ' ಎಂದರು. 

ಆರ್‌ಎಸ್‌ಎಸ್‌ನ ಒಳ ಸಂಚಿಗೆ ದೇವನೂರು ಕೈಹಾಕಿದ ಕೂಡಲೇ ನೀವು ಮತ್ತು ನಿಮ್ಮ ಪಿತೂರಿ ಗ್ಯಾಂಗ್ ಹೌಹಾರಿದೆ. ಹಾಗಾಗಿಯೇ ಅಂಡು ಸುಟ್ಟ ಬೆಕ್ಕಿನಂತೆ ನೀವು ಆರೆಸ್ಸೆಸ್ ಮತ್ತು ಚತುರ್ವರ್ಣ ನೀತಿಯನ್ನು ಅಸಂಬದ್ಧವಾಗಿ ಸಮರ್ಥಿಸಿಕೊಳ್ಳಲು ಧಾವಿಸಿದ್ದೀರಿ ಎಂದು ಟೀಕಿಸಿದರು.

ಪ್ರತಾಪ್ ಸಿಂಹ ಅವರೇ, ನಿಮಗೆ ನಿಜವಾಗಲೂ ಉತ್ತರಿಸುವ ತಾಕತ್ತಿದ್ದರೆ….ಚಾತುರ್ವರ್ಣ ಎಂಬ ಅನಿಷ್ಟ ಮನುಷ್ಯ ವಿರೋಧಿ ನೀತಿ ಹೌದೋ ಅಲ್ಲವೋ? ಸ್ಪಷ್ಟವಾಗಿ ಉತ್ತರ ಕೊಡಿ. ವರ್ಣ ಮತ್ತು ಜಾತಿ ತಾರತಮ್ಯಗಳು ಈಗ ಇಲ್ಲ ಎನ್ನುವುದಾದರೆ ಎಲ್ಲಾ ವರ್ಣದವರ ಸಾಮಾಜಿಕ ಮತ್ತು ಆರ್ಥಿಕ ನೀತಿ ಸಮನಾಗಿದೆ ಎಂಬುದನ್ನು ನಿರೂಪಿಸಿ, ಹೋಗಲಿ ನಿಮ್ಮ ಆರೆಸ್ಸೆಸ್ ಚಾತುರ್ವರ್ಣ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಎಂಬುದಾದರೆ ಅದರ ನಾಯಕತ್ವದಲ್ಲಿ ಎಲ್ಲಾ ವರ್ಣದವರೂ ಇದ್ದಾರೆ ಎಂಬುದನ್ನಾದರೂ ನಿರೂಪಿಸಿ. ಒಬ್ಬನೇ ಒಬ್ಬ ದಲಿತ ಸರಸಂಚಾಲಕನನ್ನು ಹೆಸರಿಸಿ. ಮಹಿಳೆಯರಿಗೆ ಆರೆಸ್ಸೆಸ್ ಒಳಗೆ ಏಕೆ ಸೇರಿಸಿಕೊಳ್ಳುವುದಿಲ್ಲ? ಎಂಬುದಕ್ಕೆ ತಾತ್ವಿಕ ಉತ್ತರ ನೀಡಿ. 

-ಗುರುಪ್ರಸಾದ್ ಕೆರೆಗೂಡು, ದಸಂಸ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News