ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ರಮೇಶ್‍ರಾಜು ನಿಧನ

Update: 2022-07-18 13:32 GMT
ಎಂ.ಡಿ.ರಮೇಶ್‍ರಾಜು

ಮಂಡ್ಯ, ಜು.18: ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ರಮೇಶ್‍ರಾಜು ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಮಾಜಿ ಶಾಸಕ ಜೆ.ದೇವಯ್ಯ ಅವರ ಪುತ್ರರಾದ ರಮೇಶ್‍ರಾಜು ಅವರಿಗೆ ಪತ್ನಿ ಶಾರದಾ ರಮೇಶ್‍ರಾಜು, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗ ಇದೆ. 

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಪ್ತರಾಗಿದ್ದ ರಮೇಶ್‍ರಾಜು 1994ರಲ್ಲಿ ಕೆರಗೋಡು ವಿಧಾನಸಭಾ ಕ್ಷೇತ್ರದಿಂದ ಸೋತಿದ್ದರು. ನಂತರ, ಎಸ್.ಎಂ.ಕೃಷ್ಣ ಅವರು ಅವರನ್ನು ವಿಧಾನಪರಿಷತ್‍ಗೆ ನಾಮಕರಣ ಮಾಡಿದ್ದರು.

ಮೈಷುಗರ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಶ್ರೀಯುತರು, ಮಂಡ್ಯದ ಸ್ವರ್ಣಸಂದ್ರದಲ್ಲಿ ಶ್ರೀ ಅರಕೇಶ್ವರ ಎಜುಕೇಷನ್ ಟ್ರಸ್ಟ್ ಸ್ಥಾಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಗರದ ಹೊಳಲು ರಸ್ತೆಯಲ್ಲಿರುವ ಸಾರ್ವಜನಿಕ ಸ್ಮಶಾನದಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು. 

ರಮೇಶ್‍ರಾಜು ಅವರು ನಿಧನಕ್ಕೆ ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಜೆಡಿಎಸ್ ಪರಿಶಿಷ್ಟ ವಿಭಾಗದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎಲ್.ತುಳಸೀಧರ ಸೇರಿದಂತೆ ಹಲವು ಗಣ್ಯರು ಸಂತಾಪ  ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News