‘ಮಾರ್ಕೊಪೋಲೋ' ಟಾಟಾ ಮೋಟಾರ್ ಬಿಕ್ಕಟ್ಟು ಬಹುತೇಕ ಇತ್ಯರ್ಥ: ಸಚಿವ ನಿರಾಣಿ

Update: 2022-07-18 13:52 GMT

ಬೆಂಗಳೂರು, ಜು. 18: ತೀವ್ರ ಕಂಗಟ್ಟಾಗಿ ಪರಿಣಮಿಸಿದ್ದ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಟಾಟಾ ಮೋಟಾರ್ ಕಂಪೆನಿಯ ಬಿಕ್ಕಟ್ಟನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಲು ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳು ಸಮ್ಮತಿಸಿವೆ.

ಸೋಮವಾರ ವಿಕಾಸಸೌಧದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಕಚೇರಿ ಕೊಠಡಿಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಜನಪ್ರತಿನಿಗಳು, ಟಾಟಾ ಮೋಟಾರ್ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆ ಪ್ರಮುಖರ ಜೊತೆ ನಡೆದ ಸಭೆಯಲ್ಲಿ ಸಮಸ್ಯೆಯನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕೆಂಬ ಸಚಿವ ನಿರಾಣಿ ಪ್ರಸ್ತಾವನೆಯನ್ನು ಎಲ್ಲರೂ ಸರ್ವಸಮ್ಮತದಿಂದ ಒಪ್ಪಿದರು.

ಇದೇ ವೇಳೆ ಮಾತನಾಡಿದ ಸಚಿವ ನಿರಾಣಿ, ‘ಕೈಗಾರಿಕೆಗಳು ರಾಜ್ಯದಲ್ಲಿ ಉಳಿಯಬೇಕು, ಜೊತೆಗೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ಹಿತ ಕಾಯುವುದು ಸರಕಾರದ ಉದ್ದೇಶ. ಇದರಲ್ಲಿ ಯಾರಿಗೂ  ಪ್ರತಿಷ್ಟೆ ಬೇಡ. ಎದುರಾಗಿರುವ ಸಮಸ್ಯೆಯನ್ನು ಒಟ್ಟಾಗಿ ಕುಳಿತು ಪರಿಹರಿಸಿಕೊಳ್ಳಬೇಕು' ಎಂದು ಸಲಹೆ ಮಾಡಿದರು.

‘ಟಾಟಾ ಕಂಪೆನಿ ದೇಶದ ಆಸ್ತಿ. ಇಲ್ಲಿ ಲಾಭ-ನಷ್ಟಕ್ಕಿಂತ ಕಾರ್ಮಿಕರ ಹಿತ ಹಾಗೂ ಆಡಳಿತ ಮಂಡಳಿ ಎರಡೂ ಮುಖ್ಯ. ಪದೇ ಪದೇ ಪ್ರತಿಷ್ಠೆಯನ್ನೇ ಮುಂದಿಟ್ಟುಕೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ, ಯಾರೂ ಪ್ರತಿಷ್ಠೆಗೆ ಹೋಗದೆ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಬೇಕು. ಇದರಿಂದ ಎಲ್ಲರಿಗೂ ಅನುಕೂಲ ಆಗಲಿದೆ' ಎಂದು ಅವರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ‘ನಮಗೆ ಆಡಳಿತ ಮಂಡಳಿ ಬೇರೆ  ಅಲ್ಲ, ಕಾರ್ಮಿಕರು ಬೇರೆ ಅಲ್ಲ. ಇವರಿಬ್ಬರು ಒಂದೇ ನಾಣ್ಯದ ಎರಡು ಮುಖಗಳು. ಅದರಲ್ಲೂ ಟಾಟಾ ಕಂಪೆನಿಯೆಂದರೆ ಅದು ದೇಶದ ಆಸ್ತಿ. ಯಾರೂ ಇದನ್ನು ವೈಯಕ್ತಿಕ ಮಟ್ಟಕ್ಕೆ ತೆಗೆದುಕೊಳ್ಳಬಾರದು' ಎಂದು ಆಡಳಿತ ಮಂಡಳಿ ಮತ್ತು ಕಾರ್ಮಿಕರಿಗೆ ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಅಮೃತ್ ದೇಸಾಯಿ, ಅರವಿಂದ್ ಬೆಲ್ಲದ್, ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷಾ, ಕಾರ್ಯದರ್ಶಿ ಮನೋಜ್ ಜೈನ್, ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News