ಪ್ರತಾಪ್ ಸಿಂಹ ಕೊಡಗನ್ನು ಪಿಕ್‍ನಿಕ್ ಸ್ಪಾಟ್ ಮಾಡಿಕೊಂಡಿದ್ದಾರೆ: ಎಂ.ಲಕ್ಷ್ಮಣ್ ವಾಗ್ದಾಳಿ
ಮಡಿಕೇರಿ ಜು.19 : ಕಳೆದ 8 ವರ್ಷಗಳಿಂದ ಬಿಜೆಪಿ ಸಂಸದರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಾಪ್ ಸಿಂಹ ಅವರು ಕೊಡಗನ್ನು ಪಿಕ್‍ನಿಕ್ ಸ್ಪಾಟ್ ಮಾಡಿಕೊಂಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಮತದಾರರು ಬಿಜೆಪಿಯನ್ನು ನಿರಂತರವಾಗಿ ಗೆಲ್ಲಿಸುತ್ತಾ ಬಂದಿದ್ದಾರೆ, ಆದರೆ ಬಿಜೆಪಿ ಕೊಡಗಿಗೆ ಏನು ಕೊಡುಗೆ ನೀಡಿದೆ ಎಂದು ಪ್ರಶ್ನಿಸಿದರು.
ಮೂರು ತಿಂಗಳಿಗೊಮ್ಮೆ ಕೊಡಗಿಗೆ ಭೇಟಿ ನೀಡುವ ಸಂಸದರು ಅಭಿವೃದ್ಧಿ ಬಗ್ಗೆ ಚರ್ಚಿಸುತ್ತಿಲ್ಲ. ಇವರು ಜಿಲ್ಲೆಗೆ ನೀಡಿರುವ ಕೊಡುಗೆ ಮತ್ತು ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಕೊಡಗಿಗೆ ಸಾಕಷ್ಟು ಅನುದಾನ ಬಂದಿದೆ. ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ತಂದಿರುವ ಯೋಜನೆಗಳ ಪಟ್ಟಿಯನ್ನು ನೀಡಲಿ ಎಂದರು.
ಕೊಡಗಿನ ಜನ ಶಾಂತಿ ಪ್ರಿಯರು, ಆದರೆ ಬಿಜೆಪಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದೆ. ಇಡೀ ದೇಶದ ವ್ಯವಸ್ಥೆಯನ್ನು ಹಾಳು ಮಾಡಿ, ಜಿಎಸ್‍ಟಿ ಮೂಲಕ ಜನರು ನೆಮ್ಮದಿಯಿಂದ ಬದುಕದಂತಹ ಪರಿಸ್ಥಿತಿ ತಂದಿಟ್ಟಿದ್ದಾರೆ. ಇದನ್ನು ಪ್ರಶ್ನಿಸುವ ವಿರೋಧ ಪಕ್ಷದ ಧ್ವನಿಯನ್ನು ಇಡಿ ಮೂಲಕ ಅಡಗಿಸಲಾಗುತ್ತಿದೆ ಎಂದು ಲಕ್ಷ್ಮಣ್ ಟೀಕಿಸಿದರು.
ಇನ್ನಾದರು ಕೊಡಗಿನ ಮತದಾರರು ಅಭಿವೃದ್ಧಿಯ ದೃಷ್ಟಿಯಿಂದ ಬದಲಾವಣೆಯನ್ನು ಬಯಸಲಿ ಎಂದು ತಿಳಿಸಿದರು.
ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ವಿನಯ್ ಕುಮಾರ್ ಮಾತನಾಡಿ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಇಡಿ ವಿಚಾರಣೆ ನಡೆಸುವ ಮೂಲಕ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಜು.21ರಂದು ಸಂಸತ್ ಅಧಿವೇಶನ ಇದ್ದರೂ ವಿಚಾರಣೆಗೆ ಹಾಜರಾಗಲು ಇಡಿ ಸೂಚನೆ ನೀಡಿದೆ. ತನಿಖಾ ಸಂಸ್ಥೆಗಳ ಮೂಲಕ ಪಕ್ಷದ ನಾಯಕರ ವರ್ಚಸ್ಸಿಗೆ ದಕ್ಕೆ ಉಂಟು ಮಾಡಲಾಗುತ್ತಿದೆ. ವಿರೋಧ ಪಕ್ಷದ ಧ್ವನಿಯನ್ನು ದಮನ ಮಾಡಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ಈ ಸಂಬಂಧ ಜು.21ರಂದು ದೇಶಾದ್ಯಂತ ಆಯಾ ರಾಜ್ಯಗಳ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಜು.22ರಂದು ಜಿಲ್ಲಾ ಮಟ್ಟದಲ್ಲೂ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ನಡಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆಗಸ್ಟ್ ತಿಂಗಳಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಕಾಂಗ್ರೆಸ್ ಪಕ್ಷದ ವತಿಯಿಂದ 75 ಕಿ.ಮೀ ವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತ ಮಹೋತ್ಸವವನ್ನು ಇದೇ ಆ.3ರಂದು ದಾವಣಗೆರೆಯಲ್ಲಿ ನಡೆಸಲಾಗುವುದು. ಪ್ರತಿ ಜಿಲ್ಲೆಯಿಂದಲೂ ಅಗತ್ಯ ತಯಾರಿ ಮಾಡಿಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಾಜ ಉತ್ತಪ್ಪ ಮಾತನಾಡಿ, ಕೊಡಗಿನ ಕುಲದೇವಿ ಕಾವೇರಿ ಹಾಗೂ ಕೊಡವ ಮಹಿಳೆಯರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ಆರೋಪಿಯನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರ ಕಾರ್ಯ ಶ್ಲಾಘನೀಯ ಎಂದರು.
ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಭಾವನಾತ್ಮಕವಾಗಿ ಸಮುದಾಯಗಳ ನಡುವೆ ವಿಷಬೀಜ ಬಿತ್ತಲು ಯತ್ನಿಸಿದೆ ಎಂದು ಆರೋಪಿಸಿದ ಅವರು, ಪೊಲೀಸರ ದಕ್ಷತೆಯಿಂದ ಈ ಷಡ್ಯಂತ್ರ ವಿಫಲವಾಗಿದೆ ಎಂದು ತಿಳಿಸಿದರು. ಈ ಘಟನೆಯನ್ನು ಕೂಲಂಕುಶವಾಗಿ ತನಿಖೆ ನಡೆಸಿ ಅದರ ಮೂಲ ಕಂಡು ಹಿಡಿದು ಜನರಿಗೆ ತಿಳಿಸಬೇಕು ಎಂದರು.
ಕೆಪಿಸಿಸಿ ಮುಖಂಡ ಹೆಚ್.ಎಸ್.ಚಂದ್ರಮೌಳಿ ಮಾತನಾಡಿ, ಕೊಡಗಿನಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದೆ. ಆದರೆ ಈ ಬಾರಿ ವಿಪತ್ತು ನಿರ್ವಹಣೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಟೀಕಿಸಿದರು.
ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗಿನಲ್ಲಿ ವಿಪತ್ತು ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಡೋಂಗಿ ಪರಿಸರವಾದಿಗಳ ಮಾತಿನಂತೆ ಪಶ್ವಿಮಘಟ್ಟವನ್ನು ಪರಿಸರ ಸೂಕ್ಷ್ಮ ವಲಯವನ್ನಾಗಿ ಮಾಡಲು ಹೊರಟ್ಟಿದ್ದು, ಈ ಭಾಗದ ಜನರಿಗೆ ತೊಂದರೆಯಾಗಲಿದೆ. ಆದ್ದರಿಂದ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಜು.28 ರಂದು ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಉಪಸ್ಥಿತರಿದ್ದರು.