ಅಮೃತ ನಗರೋತ್ಥಾನ: 99 ಕೋಟಿ ರೂ.ಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ
ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದಲ್ಲಿ ರಾಜ್ಯದ 11 ಜಿಲ್ಲೆಗಳ 18 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗೊಳ್ಳಲಿರುವ 99.04 ಕೋಟಿ ರೂ.ಗಳ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ ಸಚಿವ ಎಂಟಿಬಿ ನಾಗರಾಜು ಅವರ ಅಧ್ಯಕ್ಷತೆಯ ಸಮಿತಿ ಅನುಮೋದನೆ ನೀಡಿದೆ.
ವಿಧಾನಸೌಧದಲ್ಲಿ ಇಂದು ನಡೆದ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ 4ನೇ ಹಂತದ ಯೋಜನೆಗಳ ರಾಜ್ಯ ಮಟ್ಟದ ಸಮಿತಿ ಸಭೆಯಲ್ಲಿ ಸಚಿವ ಎಂಟಿಬಿ ನಾಗರಾಜು ಅವರು, ಈಗಾಗಲೇ ಅನುಮೋದನೆ ನೀಡಿರುವ ಕ್ರಿಯಾ ಯೋಜನೆಗಳ ಟೆಂಡರ್ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಆಗಸ್ಟ್ ತಿಂಗಳಲ್ಲಿ ಕಾಮಗಾರಿಗಳನ್ನು ಆರಂಭಿಸುವಂತೆ ನಿರ್ದೇಶಕನ ನೀಡಿದರು.
ಇಂದಿನ ಸಭೆಯಲ್ಲಿ ಹಾಸನ ಜಿಲ್ಲೆ ಅರಸೀಕೆರೆ ನಗರಸಭೆಯ 20.29 ಕೋಟಿ. ರೂ, ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣ ಪಂಚಾಯಿತಿಯ 4.25 ಕೋಟಿ ರೂ., ಗದಗ ಜಿಲ್ಲೆಯ ಗದಗ-ಬೆಟಗೇರಿ ನಗರ ಸಭೆಯ 34 ಕೋಟಿ ರೂ.,ವಿಜಯಪುರ ಜಿಲ್ಲೆ ಇಂಡಿ ಪುರಸಭೆಯ 8.5 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಅಲ್ಲದೆ,ಈ ಕೆಳಕಂಡ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚುವರಿ ಪ್ರೋತ್ಸಾಹ ಧನದ ಕ್ರಿಯಾ ಯೋಜನೆಗಳಿಗೂ ಸಚಿವ ಎಂಟಿಬಿ ನಾಗರಾಜು ಅಧ್ಯಕ್ಷತೆಯ ಸಮಿತಿ ಒಪ್ಪಿಗೆ ನೀಡಿತು.
ತುಮಕೂರು ಜಿಲ್ಲೆ ತಿಪಟೂರು ನಗರಸಭೆಯ 1.5 ಕೋಟಿ ರೂ. ಹಾಗೂ ಹುಳಿಯಾರು ಪಟ್ಟಣ ಪಂಚಾಯಿತಿಯ1ಕೋಟಿ ರೂ., ಬೆಳಗಾವಿ ಜಿಲ್ಲೆ ಹಾರೋಗೇರಿ ಪುರಸಭೆಯ 4 ಕೋಟಿ ರೂ., ಹಾಗೂ ರಾಮದುರ್ಗ 2.5 ಕೋಟಿ ರೂ., ಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮತ್ತು ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಗಳ ಕ್ರಮವಾಗಿ 1.5 ಕೋಟಿ ರೂ.,ಹಾಗೂ 4.75 ಕೋಟಿ ರೂ.,ಗಳ ಕ್ರಿಯಾ ಯೋಜನೆ, ವಿಜಯಪುರ ಜಿಲ್ಲೆ ಸಿಂಧಗಿ ಪುರ ಸಭೆಯ 3 ಕೋಟಿ ರೂ.,ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿಯ1.75 ಕೋಟಿ ರೂ., ಕ್ರಿಯಾ ಯೋಜನೆ,ಕಲಬುರ್ಗಿ ಜಿಲ್ಲೆ ಶಹಬಾದ್ ನಗರ ಸಭೆ 1.4 ಕೋಟಿ ರೂ.,ಸೇಡಂ ಪುರಸಭೆ 2 ಕೋಟಿ ರೂ., ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಯ 60 ಲಕ್ಷ ರೂ.,ಗಳ ಕ್ರಿಯಾ ಯೋಜನೆ, ಕೊಪ್ಪಳ ಜಿಲ್ಲೆ ಕುಕನೂರು ಮತ್ತು ಯಲಬುರ್ಗಾ ಪಟ್ಟಣ ಪಂಚಾಯಿತಿಗಳ ಕ್ರಮವಾಗಿ 3 ಮತ್ತು 2 ಕೋಟಿ ರೂ., ಮತ್ತು ಯಾದಗಿರಿ ಜಿಲ್ಲೆ ಯಾದಗಿರಿ ನಗರ ಸಭೆಯ 3 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗಳಿಗೆ ಒಪ್ಪಿಗೆ ನೀಡಿತು.
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ 4ನೇ ಹಂತದ ಯೋಜನೆಯ 3885 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗಳಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಕ್ರಿಯಾ ಯೋಜನೆಗಳು ಸಲ್ಲಿಕೆಯಾಗುತ್ತಿವೆ.
ಈ ಯೋಜನೆಯಡಿ 117 ಪಟ್ಟಣ ಪಂಚಾಯತಿಗಳು ತಲಾ 5 ಕೋಟಿ ರೂ., 124 ಪುರಸಭೆಗಳು ತಲಾ 10 ಕೋಟಿ ರೂ. ಹಾಗೂ 38 ನಗರಸಭೆಗಳು ತಲಾ 30 ಕೋಟಿ ರೂ., 23 ಜಿಲ್ಲಾ ಕೇಂದ್ರದ ನಗರಸಭೆಗಳು ಮತ್ತು 1ನೇ ದರ್ಜೆ ನಗರಸಭೆಗಳು ತಲಾ 40 ಕೋಟಿ ರೂ. ಪಡೆಯಲಿವೆ. ಈ ಹಣದಲ್ಲಿ 2022-23 ರಿಂದ 2023-24ನೇ ಸಾಲಿನ ಹಣಕಾಸು ವರ್ಷದವರೆಗೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಮಳೆ ನೀರು ಚರಂಡಿ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಹಾಗೂ ಇತರೇ ಕಾಮಗಾರಿಗಳನ್ನು ಕೈಗೊಳ್ಳಲಿವೆ.
ಇದೇ ಸಂದರ್ಭದಲ್ಲಿ ಪೌರಾಡಳಿತ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಎಂಟಿಬಿ ನಾಗರಾಜು, ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಆಕ್ಷೇಪಗಳು ವ್ಯಕ್ತವಾಗಿದ್ದು,ಆ ಬಗ್ಗೆ ಚರ್ಚಿಸಿ ಎಲ್ಲಾ ವೃಂದದ ಅಧಿಕಾರಿಗಳಿಗೆ ಪದೋನ್ನತಿ ಹಕ್ಕನ್ನು ಒದಗಿಸಲು ಅಗತ್ಯ ಕ್ರಮಕ್ಕೆ ಸೂಚಿಸಿದರು.
ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್, ಪೌರಾಡಳಿತ ನಿರ್ದೇಶನಾಲಯದ ಇಲಾಖೆ ನಿರ್ದೇಶಕಿ ಶ್ರೀಮತಿ ಅರ್ಚನಾ,ಮುಖ್ಯ ಇಂಜಿನಿಯರ್ ಸತ್ಯನಾರಾಯಣ ಮತ್ತಿತ್ತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.